ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಿನ್ನೆಯಷ್ಟೇ ಮತದಾನ ಮುಗಿದಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿಗಳು ಹಾಗೂ ನಾಯಕರು ವಿಶ್ರಾಂತಿಗೆ ಜಾರಿದ್ದಾರೆ. ನಿನ್ನೆ ರಾತ್ರಿ ಹೆಚ್ಡಿಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಿಂಗಾಪುರ್ಗೆ ತೆರಳಿದ್ದು, ಎರಡು ದಿನಗಳ ಕಾಲ ವಿಶ್ರಾಂತಿ ಪಡೆದು ಮೇ 13 ರಂದು ರಾಜ್ಯಕ್ಕೆ ವಾಪಸಾಗಲಿದ್ದಾರೆ.
ನಿನ್ನೆ ಸಂಜೆ ಮತದಾನ ಮುಕ್ತಾಯವಾದ ನಂತರ ಜೆಡಿಎಸ್ ಅಭ್ಯರ್ಥಿಗಳು ಹಾಗೂ ನಾಯಕರು ಸಹ ವಿಶ್ರಾಂತಿಗಾಗಿ ತೆರಳಿದ್ದಾರೆ. ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಗುರಿಯೊಂದಿಗೆ ಐದಾರು ತಿಂಗಳಿನಿಂದ ಕುಮಾರಸ್ವಾಮಿ ನಿರಂತರ ಪಂಚರತ್ನ ರಥಯಾತ್ರೆ ಮೂಲಕ ಪ್ರವಾಸ ಕೈಗೊಂಡಿದ್ದರು. ಸತತ ಚುನಾವಣಾ ಪ್ರಚಾರದಿಂದ ಆಯಾಸಗೊಂಡಿದ್ದ ಹೆಚ್ಡಿಕೆ ವಿಶ್ರಾಂತಿಗಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ಜೆಡಿಎಸ್ ಅಭ್ಯರ್ಥಿಗಳು ರೆಸಾರ್ಟ್‌ಗಳಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರೆ, ಇನ್ನೂ ಕೆಲ ಅಭ್ಯರ್ಥಿಗಳು ಮನೆಯಲ್ಲೇ ರಿಲ್ಯಾಕ್ಸ್ ಮೂಡ್‍ಗೆ ಜಾರಿದ್ದಾರೆ.
ಇದನ್ನೂ ಓದಿ :ಜೆಡಿಎಸ್ ರಾಜ್ಯದಲ್ಲಿ ಬಹುಮತ ಪಡೆಯಲಿದೆ : ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸ
ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೆಲವು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಲಾಗಿಲ್ಲ. ಇದರಿಂದ ಕೆಲವು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಹಿನ್ನಡೆಯಾಬಹುದು ಎಂದು ಹೆಚ್ಡಿಕೆ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಉತ್ತರ ಕರ್ನಾಟಕದ ಹಲವು ಕಡೆಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು, ಅಫ್ಜಲ್‌ಪುರ, ಸೇಡಂ, ನವಲಗುಂದ, ರಾಯಭಾಗ, ಕುಡಚಿ, ರಾಯಚೂರು ಗ್ರಾಮೀಣ, ಕೊಪ್ಪಳ, ಸಿಂದಗಿ ಸೇರಿದಂತೆ ಕನಿಷ್ಠ 25 ಕ್ಷೇತ್ರಗಳಲ್ಲಿ ಹಣದ ಕೊರತೆಯಿಂದಾಗಿ ನಮಗೆ ಹಿನ್ನಡೆ ಆಗಿದೆ. ಇದರಿಂದಾಗಿ ಗೆಲ್ಲುವ ಕ್ಷೇತ್ರಗಳಲ್ಲಿಯೂ ಪೆಟ್ಟು ತಿಂದಿದ್ದೇವೆ. ಕೊನೆಯ ಹಂತದಲ್ಲಿ ಪಾರ್ಟಿ ಫಂಡ್ ವಿಚಾರದಲ್ಲಿ ನಾವು ಅಭ್ಯರ್ಥಿಗಳ ನಿರೀಕ್ಷೆಯನ್ನು ಮುಟ್ಟಲು ಆಗಿಲ್ಲ ಎಂದಿದ್ದರು. ಇನ್ನೊಂದೆಡೆ, ಮತದಾನೋತ್ತರ ಸಮೀಕ್ಷೆಗಳ ವರದಿಯಿಂದ ಹೆಚ್ಡಿಕೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ :ಮುಗಿದ ಚುನಾವಣೆ ತಲೆಬಿಸಿ : ರಿಲಾಕ್ಸ್ ಮೂಡ್ನಲ್ಲಿ ನಾಯಕರು, ಆಪ್ತರೊಂದಿಗೆ ಚಹಾಕೂಟ
ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಕೂಡ ರಿಲ್ಯಾಕ್ಸ್ ಮೂಡ್‍ಗೆ ಜಾರಿರುವುದು ಕಂಡು ಬಂದಿದೆ. ಡಿಕೆಶಿ ಸ್ಥಳೀಯ ಮುಖಂಡರ ಜೊತೆ ಕನಕಪುರದ ಕೆ.ಎನ್.ಎಸ್. ವೃತ್ತದ ವಾಸು ಹೋಟೆಲ್‍ಗೆ ತೆರಳಿ ಇಂದು ಇಡ್ಲಿ ಸವಿದರು. ಚುನಾವಣೆ ಬಗ್ಗೆ ಸ್ಥಳೀಯರ ಜೊತೆ ಕೆಲಕಾಲ ಚರ್ಚೆ ನಡೆಸಿದರು. ಬಳಿಕ ಕನಕಪುರದ ಕೋಡಿಹಳ್ಳಿಯ ನಿವಾಸಕ್ಕೆ ಡಿಕೆಶಿ ಹಾಗೂ ಡಿ.ಕೆ.ಸುರೇಶ್ ಭೇಟಿ ನೀಡಿ ತಾಯಿ ಗೌರಮ್ಮನವರ ಆಶೀರ್ವಾದ ಪಡೆದರು.
ಇದನ್ನೂ ಓದಿ :ಸಿಎಂ ಬೊಮ್ಮಾಯಿ ನಮ್ಮವರಿದ್ರೂ ಏನೂ ಮಾಡಿಲ್ಲ, ಜನ ಬದಲಾವಣೆ ಬಯಸಿದ್ದಾರೆ : ಶೆಟ್ಟರ್