ಬೆಂಗಳೂರು : ನೈಸ್ ಯೋಜನೆ ಹೆಸರಿನಲ್ಲಿ ಅಕ್ರಮವಾಗಿ ಕಬಳಿಸಿರುವ 11,000 ಸಾವಿರ ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ರೈತರಿಗೆ ಕೊಡಬೇಕು. ಇಲ್ಲವಾದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಸಿಂಗೂರು ಮಾದರಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಶಾಸಕರ ಭವನದಲ್ಲಿ ಬುಧವಾರ ನೈಸ್ ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ್ಯ ರೈತರ ಸಂಘ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹೆಚ್ಡಿಕೆ, ನೈಸ್ ಭೂಮಿ ಕಳೆದುಕೊಂಡಿರುವ ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಹೋರಾಟ ಪಕ್ಷಾತೀತ, ರಾಜಕೀಯ ಹೊರತಾಗಿ ನಡೆಯಬೇಕು. ಸರ್ಕಾರ ಭೂಮಿಯನ್ನು ವಾಪಸ್ ಕೊಡದಿದ್ದರೆ ಸಿಂಗೂರು ಮಾದರಿ ಹೋರಾಟ ಆರಂಭ ಮಾಡೋಣ. ಯೋಜನೆಯನ್ನು ಕೈಗೆತ್ತಿಕೊಳ್ಳದಿದ್ದರೆ ಭೂಮಿಯನ್ನು ರೈತರಿಗೆ ವಾಪಸ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಸರ್ಕಾರ 5000 ಎಕರೆ ಭೂಮಿಯನ್ನು ರೈತರಿಗೆ ವಾಪಸ್ ಮಾಡಿದೆ ಎಂದು ಹೇಳಿದರು.
ನೈಸ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ವಾಪಸ್ ಪಡೆಯಲು ಕಾನೂನಿನ ತೊಡಕಿಲ್ಲ. ಸರ್ಕಾರ ಇಡೀ ಯೋಜನೆಯನ್ನು ವಾಪಸ್ ಪಡೆಯುವುದಕ್ಕೆ ನ್ಯಾಯಾಲಯದ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ. ನೈಸ್ ಕಂಪನಿ ಸರ್ಕಾರ ವಿರುದ್ಧ ಹಾಕಿದ್ದ ಎಲ್ಲಾ ನಿಂದನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಕಂಪನಿ ಮಾಡಿರುವ ಅಕ್ರಮಗಳು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಸದನ ಸಮಿತಿ ವರದಿ ಹಿನ್ನೆಲೆಯಲ್ಲಿ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಹೆಚ್ಡಿಕೆ ಆಗ್ರಹಿಸಿದರು.
ನೈಸ್ ಯೋಜನೆ ಬಗ್ಗೆ ಹೆಚ್ಡಿಕೆ ಬೇಸರ : 2006ರಲ್ಲಿಯೇ ನಾನು ನೈಸ್ ಯೋಜನೆಯನ್ನು ರದ್ದು ಮಾಡಿ ಸರ್ಕಾರದ ವಶಕ್ಕೆ ಪಡೆಯಲು ಹೊರಟಿದ್ದೆ. ಆಗ ಆಗಲಿಲ್ಲ, ಮತ್ತೆ ಸಿಎಂ ಅದಾಗಲೂ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಸದನದಲ್ಲಿ ವಿಧೇಯಕ ತರಲು ಹೊರಟೆ. ಎರಡೂ ಬಾರಿಯೂ ನಾನು ಯಶಸ್ವಿ ಆಗಲಿಲ್ಲ. ಮೈತ್ರಿ ಸರ್ಕಾರ ಇದ್ದ ಕಾರಣ ಆಗಲಿಲ್ಲ. 2018ರಲ್ಲಿ ಕಾಂಗ್ರೆಸ್ ನವರೂ ನನ್ನನ್ನು ಮುಖ್ಯಮಂತ್ರಿ ಎಂದು ಇಟ್ಟುಕೊಂಡಿರಲಿಲ್ಲ. ಒಬ್ಬ ಗುಮಾಸ್ತನಂತೆ ನಡೆಸಿಕೊಂಡರು. ಹೀಗಾಗಿ ವಿಫಲವಾದೆ ಎಂದು ಕುಮಾರಸ್ವಾಮಿ ಹೇಳಿದರು.
ನೈಸ್ ಯೋಜನೆ ದೇವೇಗೌಡರ ಪಾಪದ ಕೂಸಲ್ಲ. ಅವರು ಸಹಿ ಹಾಕಿದ್ದು ರಸ್ತೆ ನಿರ್ಮಾಣ ಮಾಡಲಿಕ್ಕೆ. ಆಮೇಲೆ ಅವರು ಪ್ರಧಾನಿ ಆಗಿ ದಿಲ್ಲಿಗೆ ಹೋದ ಮೇಲೆ ಯೋಜನೆಯನ್ನು ಹಳ್ಳ ಹಿಡಿಸಿದರು. ನಂತರ ಫ್ರೇಮ್ ವರ್ಕ್ ಅಗ್ರಿಮೆಂಟ್ ಎಂದು ಮಾಡಿಕೊಂಡು ಮೂಲ ಒಪ್ಪಂದವನ್ನು ಸಂಪೂರ್ಣವಾಗಿ ತಿರುಚಲಾಗುತ್ತದೆ. ಅಧಿಕಾರಿಗಳು, ರಾಜಕಾರಣಿಗಳನ್ನು ಬುಕ್ ಮಾಡಿಕೊಂಡು ಇಡೀ ಯೋಜನೆಯನ್ನು ಹಾಳು ಮಾಡಿದರು. ಒಪ್ಪಂದ ಹಾಗೂ ಹೈಕೋರ್ಟ್ ಆದೇಶಗಳನ್ನು ನೈಸ್ ಕಂಪನಿ ಉಲ್ಲಂಘನೆ ಮಾಡಿದೆ ಎಂದು ಹೆಚ್ಡಿಕೆ ಆರೋಪಿಸಿದರು.