ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ ಮಾಡಿದವರು ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ಸೇರಿದಂತೆ ಕೆಲವಾರು ಪೊಲೀಸ್ ಅಧಿಕಾರಿಗಳು, ತಪ್ಪೆಸಗಿದ ಅಭ್ಯರ್ಥಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಅನ್ಯಾಯಕ್ಕೆ ತುತ್ತಾಗುತ್ತಿದ್ದಾರೆ ಎಂದರು.
ಈ ಹಗರಣದ ತನಿಖೆ ಗಂಭೀರ ಹಂತ ತಲುಪಿದೆ ಅಂತ ನನ್ನ ಭಾವನೆ. ಈವರೆಗೆ 26 ಪೊಲೀಸರನ್ನು ಬಂಧನ ಮಾಡಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿತರು ಜಾಮೀನು ತೆಗೆದುಕೊಂಡು ಹೊರ ಬರುವುದನ್ನು ನೋಡಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಆ ರೀತಿ ಆಗಿಲ್ಲ. ಅಂದರೆ, ತನಿಖೆ ಗಂಭೀರವಾಗಿ ನಡೆಯುತ್ತಿದೆ ಎಂದು ಅರ್ಥ ಎಂದು ಅಭಿಪ್ರಾಯಪಟ್ಟರು.
ಅಪರಾಧಿಗಳಿಗೆ ಶಿಕ್ಷೆ ಒಂದು ಪಾಠವಾಗಬೇಕು: ಮುಂದಿನ ದಿನಗಳಲ್ಲಿ ಸರ್ಕಾರ ಯಾವುದೇ ನೇಮಕಾತಿ ಮಾಡಲಿ, ಪಿಎಸ್ಐ ಹಗರಣದ ತನಿಖೆ ಮತ್ತು ಅಪರಾಧಿಗಳಿಗೆ ಶಿಕ್ಷೆ ಆಗುವುದು ಒಂದು ಪಾಠವಾಗಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಸಿದ್ದರಾಮಯ್ಯರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಕೂಡ ನೇಮಕಾತಿ ನಡೆಯಿತು. 2011ರಲ್ಲಿ ಕೆಪಿಎಸ್ಸಿ ನೇಮಕಾತಿ ನಡೆಯುವಾಗ ಯುವತಿ ಒಬ್ಬರು ಪತ್ರ ಬರೆದರು ಎನ್ನುವ ಕಾರಣಕ್ಕೆ ಅಂದು 374 ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆ ಕೈಬಿಡಲಾಯಿತು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಿತ್ತು.
ಆದರೆ, ಈ ಸರ್ಕಾರ ಬಂದ ಮೇಲೆ ಆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಆಗಿದ್ದ ಅನ್ಯಾಯವನ್ನು ಸರಿ ಮಾಡಿತು. ಅದಕ್ಕಾಗಿ ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಕೆಪಿಎಸ್ಸಿಯನ್ನು ಸ್ವಚ್ಚ ಮಾಡುತ್ತೇವೆ ಎಂದಿದ್ದರು. ಆದರೆ ಆ ಕೆಲಸ ಆಗಿದೆಯಾ ಎಂದು ಪ್ರಶ್ನಿಸಿದರು.
ಪ್ರತಿಭಾನ್ವಿತರಿಗೆ ಏಕೆ ಅನ್ಯಾಯ?: ಈಗ ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ಒಬ್ಬ ಅಭ್ಯರ್ಥಿ ಐಎಎಸ್‌ಗೆ ಆಯ್ಕೆ ಆಗಿದ್ದಾರೆ. ವಿಕಲಚೇತನ ಯುವಕನೊಬ್ಬ ದೊಡ್ಡ ಸಾಧನೆ ಮಾಡಿದ್ದಾನೆ. ಅನೇಕರು ಬೇರೆ ಬೇರೆ ಹುದ್ದೆಗೆ ನೇಮಕ ಆಗಿದ್ದಾರೆ. ಅಲ್ಲಿಗೆ ಬಂಧನಕ್ಕೆ ಒಳಗಾಗಿರುವ ಆರೋಪಿತರನ್ನು ಹೊರತುಪಡಿಸಿ ಅನೇಕ ಪ್ರತಿಭಾನ್ವಿತರು ಈ ಪರೀಕ್ಷೆ ಬರೆದು ತೇರ್ಗಡೆ ಆಗಿದ್ದಾರೆ. ಅವರಿಗೆ ಏಕೆ ಅನ್ಯಾಯ ಆಗಬೇಕೆಂದು ಕೇಳಿದರು.
ಒಂದೆಡೆ ಅನ್ಯಾಯ ಸರಿ ಮಾಡಬೇಕು. ಇನ್ನೊಂದೆಡೆ ತನಿಖೆಯು ಹಾದಿ ತಪ್ಪಬಾರದು. ಈಗ 545 ಅಭ್ಯರ್ಥಿಗಳ ನೇಮಕಾತಿ ರದ್ದು ಮಾಡಲು ನಿರ್ಧರಿಸಿದೆ ಸರ್ಕಾರ. ಇಂತಹ ಲೋಪ ಮತ್ತೆಂದೂ ಆಗದಂತೆ ಎಚ್ಚರಿಕೆ ವಹಿಸಬೇಕು.
ಸರ್ಕಾರದ ಹಾಗೂ ರಾಜಕೀಯ ವ್ಯವಸ್ಥೆ ಹಾಗೂ ಪ್ರಜಾಪಭುತ್ವ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಬರುವ ರೀತಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದೇಶ ನೀಡಬೇಕು. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು. ಯಾರೆಲ್ಲ ಘಟನೆ ಹಿಂದಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಜನ ನಮ್ಮನ್ನ ನಂಬುತ್ತಾರೆ ಎಂದು ಎಂದರು.
ಪೊಲೀಸ್ ಅಧಿಕಾರಿಗಳು ಸೇರಿ ರಾಜಕಾರಣಿಗಳ ವಿರುದ್ಧವೂ ತನಿಖೆ ನಡೆಯಲಿ. ಈಗ ಶಾಸಕ ಬಸವರಾಜ ದಡೇಸುಗೂರು ಹೆಸರು ಕೇಳಿ ಬಂದಿದೆ. ಅವರ ಮೇಲೆ ಆರೋಪ ಇದ್ದರೆ ತನಿಖೆ ಆಗಲಿ. ಈ ಬಗ್ಗೆ ವಿಪಕ್ಷ ನಾಯಕರ ಹೇಳಿಕೆಗೆ ನನ್ನ ಸಹಮತ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಹಗರಣ.. ನೀವು ಈವೆಂಟ್ ಮ್ಯಾನೇಜರ್ ಎಂದ ಸಿಎಂ: ನನ್ನನ್ನು ಟಾರ್ಗೆಟ್ ಮಾಡಿದಷ್ಟು ಲಾಭ ಎಂದ ಸಿದ್ದು