ಬೆಂಗಳೂರು:ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳು, ನಾಗರೀಕರನ್ನು ಸುರಕ್ಷಿತವಾಗಿ ಏರ್ʼಲಿಫ್ಟ್ ಮಾಡಿ ರಾಜ್ಯಕ್ಕೆ ಕರೆತರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.
ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಜಾತ್ಯತೀತ ಜನತಾದಳ ಪಕ್ಷದ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಷ್ಯಾ ಆಕ್ರಮಣದಿಂದ ತತ್ತರಿಸಿರುವ ಕನ್ನಡಿಗರು ಉಕ್ರೇನ್‌ನಲ್ಲಿ ಜೀವಭಯದಿಂದ ತತ್ತರಿಸಿದ್ದಾರೆ. ಕೂಡಲೇ ಅವರನ್ನು ರಕ್ಷಿಸಿ ಕರೆತರುವ ಕೆಲಸ ಆಗಬೇಕು ಎಂದರು. ಇದರ ಜೊತೆಗೆ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಕೇಂದ್ರ ಸರಕಾರವು ಎಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಹುಡುಕಿ ಕನ್ನಡಿಗರನ್ನು ವಾಪಸ್ ಕರೆತರಬೇಕು' ಎಂದಿದ್ದಾರೆ.
ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ನಲ್ಲಿ ರಾಜ್ಯದ ನೂರಾರು ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿಯನ್ನು ಸರ್ಕಾರವೇ ನೀಡಿದೆ. ಆ ದೇಶದ ಕೀವ್ ನಗರ ಸೇರಿ ವಿವಿಧೆಡೆ ಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ಎಲ್ಲ ತುರ್ತು ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು. ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಬೇಕು.