ಕರ್ನಾಟಕ

karnataka

ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಸುವ ನೈತಿಕ ಹಕ್ಕಿಲ್ಲ: ಹೆಚ್​ಡಿಕೆ ಕಿಡಿ

By

Published : Jun 28, 2022, 5:37 PM IST

ವಿದ್ಯುತ್ ದರ ಏರಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

HD Kumaraswamy tweet
ಹೆಚ್.ಡಿ ಕುಮಾರಸ್ವಾಮಿ ಟ್ವೀಟ್

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇದೆ. ಈಗ ಬೆಲೆ ಏರಿಸಿ, ಇನ್ನೇನು ಚುನಾವಣೆ ದಿನಾಂಕ ಹತ್ತಿರದಲ್ಲಿದೆ ಎನ್ನುವಾಗ ದರ ಇಳಿಸುವ ಸ್ಟಂಟ್ ಇದರ ಹಿಂದೆ ಇದೆ. ವೆಚ್ಚ ಹೊಂದಾಣಿಕೆಯ ಹೊಸ ಐಡಿಯಾ ಅಂದರೆ ಇದೇನಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ವಿದ್ಯುತ್ ಉತ್ಪಾದನೆಯೂ ಚೆನ್ನಾಗಿದೆ. ಹೆಚ್ಚುವರಿ ವಿದ್ಯುತ್ ಇದೆ ಎಂದು ಸರ್ಕಾರವೇ ಹೇಳುತ್ತಿದೆ. ಹೀಗಿದ್ದರೂ ದರ ಏರಿಕೆ!! ಇದರ ಹಿಂದಿನ ಹುನ್ನಾರ ಏನು? ಎಂದು ಪ್ರಶ್ನಿಸಿದ್ದಾರೆ.

ಮಾಸಿಕ 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚು ಬೆಲೆ ತೆರಬೇಕು. ಅಂದರೆ, ಬಡವರು ಮತ್ತು ಮಧ್ಯಮ ವರ್ಗದ ಜನರು ವಿದ್ಯುತ್ ಬಳಸದೇ ಕತ್ತಲಲ್ಲಿ ಕೊಳೆಯಬೇಕೆ? ಗತಿಶಕ್ತಿ ಯೋಜನೆ ಮೂಲಕ ದೇಶಕ್ಕೆ ಹೊಸ ಗತಿ ಕಾಣಿಸುವುದು ಎಂದರೆ ಇದೆನಾ? ಇಂಧನ ಇಲಾಖೆಯ ಅಸಮರ್ಪಕ ನಿರ್ವಹಣೆ ಹಾಗೂ ವಿದ್ಯುತ್ ಸೋರಿಕೆಯನ್ನು ತಡೆಯಲಾಗದ ಅದಕ್ಷತೆ ಬಗ್ಗೆ ಜನರಿಗೆ ಗೊತ್ತಿದೆ. ಆ ಹೊರೆಯನ್ನು ಜನರ ಮೇಲೆ ಹೇರಿ ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಲೂಟಿಗೆ ತುತ್ತಾಗಿರುವ ಜನರನ್ನು ಮತ್ತಷ್ಟು ಸುಲಿಗೆ ಮಾಡುವ ಪ್ರಯತ್ನ ಇದಾಗಿದೆ ಎಂದು ಹೆಚ್​ಡಿಕೆ ಟೀಕಿಸಿದ್ದಾರೆ.

ಇದನ್ನೂ ಓದಿ:ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್: ಜು.1ರಿಂದ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಬರೆ

ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು. ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ, ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಕೆ ಮಾಡುವ ನೈತಿಕ ಹಕ್ಕಿಲ್ಲ. ಒಂದು ವೇಳೆ ಏರಿಕೆ ಮಾಡಿದರೆ ಜನರನ್ನು ಒಗ್ಗೂಡಿಸಿ ಜನಾಂದೋಲನಕ್ಕೆ ಇಳಿಯಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ABOUT THE AUTHOR

...view details