ಬೆಂಗಳೂರು:ನಾವೇನ್ ನೋಟ್ ಪ್ರಿಂಟ್ ಮಾಡ್ತೀವಾ?, ಜಡ್ಜ್‌ಗಳು ಸರ್ವಜ್ಞರಲ್ಲ. ಕೊರೊನಾ ವೈರಸ್‌ಗಾಗಿ ಚೀನಾವನ್ನು ದೂಷಿಸಬೇಕು, ನೇಣು ಹಾಕಿಕೊಳ್ಳಲು ಆಗುತ್ತಾ?, ಕೋವಿಡ್ ಪ್ಯಾಕೇಜ್ ಕೊಡಲು ಆಗಲ್ಲ, ದೇಶದ ದುಸ್ಥಿತಿಗೆ ವಿರೋಧ ಪಕ್ಷಗಳು ಕಾರಣ.. ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಅಸಮರ್ಥರ ಕೈಲಾಗದ ಮಾತುಗಳಿವು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ಡಿಕೆ, 'ಅವರು ಅಷ್ಟು ವರ್ಷ ಅಧಿಕಾರ ಮಾಡಿದರು, ಇವರು ಅಷ್ಟು ವರ್ಷ ತಿಂದರು' ಎಂದು ದೂಷಿಸಿಕೊಂಡೇ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಪ್ರತಿಯೊಂದಕ್ಕೂ ವಿರೋಧ ಪಕ್ಷಗಳನ್ನು ದೂಷಿಸುವ ಬಿಜೆಪಿಗೆ ಅಧಿಕಾರವೇಕೆ? 'ಕೊಟ್ಟ ಕುದುರೆಯನ್ನು ಏರಲಾಗದವನು ಧೀರನೂ ಅಲ್ಲ, ಶೂರನೂ ಅಲ್ಲ ಎಂಬ ಮಾತು ಬಿಜೆಪಿಗೆ ಹೊಂದುವಂತದ್ದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಕೋವಿಡ್ ನಿಭಾಯಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ. ಅತಿ ಹೆಚ್ಚು ಕೋವಿಡ್ ಪ್ರಕರಣಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂದಿದೆ. ಕೇಂದ್ರ ಕೋವಿಡ್ ಅನ್ನು ಅಸಮರ್ಪಕವಾಗಿ ನಿರ್ವಹಿಸಿದ್ದೇ ಇದಕ್ಕೆ ಕಾರಣ. ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂದಿದೆ. ಇದು ರಾಜ್ಯ ಸರ್ಕಾರದ ಅಸಮರ್ಥತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಸಮರ್ಥತೆ ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಈಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಕೈಲಾಗದ ಮಾತಾಡುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದಾರೆ. ಭೂ ಕೈಲಾಸ ಸೃಷ್ಟಿಸುವ ಬಿಜೆಪಿ ಮಾತು ನಂಬಿ ಜನ ಅಧಿಕಾರ ನೀಡಿದ್ದಾರೆ. ಜನರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳಬೇಕು. ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಒತ್ತಾಯಿಸಿದ್ದಾರೆ.