ಕರ್ನಾಟಕ

karnataka

ETV Bharat / state

ನಿಮ್ಮ ಹೆಸರಿನಲ್ಲೇ ರಾಮನಿದ್ದಾನೆ, ಸತ್ಯರಾಮಯ್ಯ ಆಗಿದ್ದರೆ ನೈಸ್​ಗೆ ನ್ಯಾಯ ಕೊಡಿ: ಹೆಚ್.​ಡಿ.ಕುಮಾರಸ್ವಾಮಿ - ಬೆಂಗಳೂರು

ನಿಮ್ಮ ಹಂಗಿನಲ್ಲಿದ್ದ ನನಗೆ, ನಿಮ್ಮದೇ ಪಕ್ಷದವರ ವಿರುದ್ಧ ತನಿಖೆ ನಡೆಸಿ, ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯುವ ದಮ್ಮು, ತಾಕತ್ತು ಇರಲಿಲ್ಲ. ನಾನು ನಿಜ ಒಪ್ಪಿಕೊಳ್ಳುತ್ತೇನೆ. ಆದರೆ, ನಿಮ್ಮದು ಪೂರ್ಣ ಬಹುಮತದ ಬಲಿಷ್ಠ ಸರ್ಕಾರ. ನುಡಿದಂತೆ ನಡೆಯುವ 'ಅಪರ ಹರಿಶ್ಚಂದ್ರ'ನ ಸರ್ಕಾರ, ಹೌದಲ್ಲವೇ? ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

Siddaramaiah, HD Kumaraswamy
ಸಿದ್ದರಾಮಯ್ಯ, ಹೆಚ್​ಡಿಕೆ

By

Published : Jul 23, 2023, 12:34 PM IST

ಬೆಂಗಳೂರು: "ಸಿದ್ದರಾಮಯ್ಯನವರೇ, ನೀವು ಈಗ ಕರ್ನಾಟಕದ ಮುಖ್ಯಮಂತ್ರಿ. ನನಗೂ ಮುಖ್ಯಮಂತ್ರಿ, ಮಹಾದೇವಪ್ಪ ಅವರಿಗೂ ಮುಖ್ಯಮಂತ್ರಿ, ಕಾಕಾ ಪಾಟೀಲರಿಗೂ ಮುಖ್ಯಮಂತ್ರಿ. ಇಂತಹ ನಿಮ್ಮನ್ನು 'ಸುಳ್ಳುರಾಮಯ್ಶ' ಎಂದು ಕರೆಯುವುದು ನನಗೆ ಸುತಾರಾಂ ಇಷ್ಟವಿಲ್ಲ. ಏಕೆಂದರೆ, ನಿಮ್ಮ ಹೆಸರಿನಲ್ಲೇ 'ರಾಮ'ರಿದ್ದಾರೆ. ತಾವು 'ಸತ್ಯರಾಮಯ್ಯ'ನವರೇ ಆಗಿದ್ದರೆ, ಸ್ವತಃ ತಾವುಗಳೇ ನೇಮಿಸಿದ್ದ, ತಮ್ಮದೇ ಸರ್ಕಾರದ ಕಾನೂನು ಸಚಿವರೇ ಮುಖ್ಯಸ್ಥರಾಗಿದ್ದ ಸದನ ಸಮಿತಿ ನೀಡಿದ್ದ ನೈಸ್ ಕರ್ಮಕಥೆಯನ್ನು ನೀವು ದಯಮಾಡಿ ಪುರುಸೊತ್ತು ಮಾಡಿಕೊಂಡು ಪಾರಾಯಣ ಮಾಡಿ" ಎಂದು ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯನವರಿಗೆ ಟಕ್ಕರ್ ನೀಡಿರುವ ಹೆಚ್​ಡಿಕೆ, ನೈಸ್ ಅಕ್ರಮ ತನಿಖೆಗೆ ನಾನೇನು ಮಾಡಿದ್ದೆ ಎಂದು ಸಿಎಂ ಸಾಹೇಬರು ಕೇಳಿದ್ದಾರೆ. ಈ ಬಾಲಿಶ ಪ್ರಶ್ನೆಗೆ ಗೌರವದಿಂದಲೇ ಉತ್ತರಿಸುವೆ. ನಾನು ಸಿಎಂ ಆಗಿದ್ದಾಗ ನನ್ನ ಜತೆಗಿದ್ದ ಅಡ್ವೋಕೇಟ್ ಜನರಲ್, ಅವರ ಕಾನೂನು ತಂಡ ನೈಸ್ ದೌಲತ್ತಿನ ಹುಟ್ಟಡಗಿಸಿತ್ತು. ಅದುವರೆಗೆ ಅಧಿಕಾರಿಗಳನ್ನು ಬೆದರಿಸಿಟ್ಟುಕೊಂಡಿದ್ದ ಆ ಕಂಪನಿಗೆ ಬೊಂಬೆ ತೋರಿಸಿದ್ದೆವು ಎಂದಿದ್ದಾರೆ.

ವಿವಿಧ ನ್ಯಾಯಾಲಯಗಳಲ್ಲಿ ಹೂಡಲಾಗಿದ್ದ ಎಲ್ಲ ನಿಂದನಾ ಅರ್ಜಿಗಳನ್ನು 2019 ಜುಲೈನಲ್ಲಿ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಅದಕ್ಕಾಗಿ ಅಂದಿನ ಅಡ್ವೋಕೇಟ್ ಜನರಲ್, ಮತ್ತವರ ಕಾನೂನು ತಂಡವನ್ನು ನಾನು ಅಭಿನಂದಿಸಲೇಬೇಕು. ಹಿಂದಿನ ಬಿಜೆಪಿ ಸರ್ಕಾರವೂ ಈ ಲೂಟಿ ಕಂಪನಿಯ ರೆಕ್ಕೆಪುಕ್ಕ ಕತ್ತರಿಸಿ ಹಾಕಿತ್ತು. ಅಂದಿಗೆ (2018) ನೈಸ್​ನ ಕೊಚ್ಚೆಯಲ್ಲಿ ಹೊರಳಾಡಿ ಪೊಗದಸ್ತಾಗಿ ಮೇಯ್ದು ಬಲಿತಿದ್ದ ಪ್ರಾಣಿಗಳನ್ನು ಎದುರು ಹಾಕಿಕೊಂಡು ನಾನು ತೆಗೆದುಕೊಂಡ ರಿಸ್ಕ್ ಸಣ್ಣದೇನಲ್ಲ ಸಿದ್ದರಾಮಯ್ಯ ಅವರೇ. ನನ್ನ ಮೇಲೆ ಬಂದ ಒತ್ತಡಗಳ ಬಗ್ಗೆ ನಿಮಗೂ ಮಾಹಿತಿ ಇರಬಹುದು. ಆಗ ನೀವು ಮತ್ತು ನಿಮ್ಮ ಟೀಂ ನನಗೆ ಕೊಟ್ಟ 'ನಿತ್ಯ ಕಿರುಕುಳ'ವನ್ನು ಮರೆಯಲಾದೀತೆ? ಎಂದು ಪ್ರಶ್ನಿಸಿದ್ದಾರೆ.

'ಸಿದ್ದನೆಪ' ಹೇಳಿ ಸಮಯವನ್ನು ಕೊಲ್ಲಬೇಡಿ: ಇಡೀ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ದಿಟ್ಟಹೆಜ್ಜೆ ಇಡಿ. 'ಸಿದ್ದನೆಪ' ಹೇಳಿ ಸಮಯವನ್ನು ಕೊಲ್ಲಬೇಡಿ. ಬಹುಮತ ಇದ್ದರೆ ಸಾಲದು, ಬದ್ಧತೆಯೂ ಇರಬೇಕು. ಅಲ್ಲವೇ? ಎಂದು ಹೆಚ್​ಡಿಕೆ ಕುಟುಕಿದ್ದಾರೆ. ನಾನು ರೈತರ ಸಾಲಮನ್ನಾ ಮಾಡಿದೆ ಎನ್ನುವುದು ಎಷ್ಟು ಸತ್ಯವೋ, ಅದಕ್ಕೆ ನೀವು ಹೆಜ್ಜೆಹೆಜ್ಜೆಗೂ ಅಡ್ಡಿ ಮಾಡಿದ್ದೂ ಅಷ್ಟೇ ಸತ್ಯ. ಭಾಗ್ಯಗಳಿಗೆ ನಯಾಪೈಸೆ ಕಡಿಮೆ ಆಗಬಾರದು ಎಂದು ನನಗೆ ಕೊಟ್ಟ ಚಿತ್ರಹಿಂಸೆ ಅಸತ್ಯವೇ?. ಗಟ್ಟಿ ದನಿಯಲ್ಲಿ ಅಬ್ಬರಿಸಿ ಹೇಳಿದರೆ ಸುಳ್ಳು ಸತ್ಯವಾಗುವುದಿಲ್ಲ. ಸತ್ಯರಾಮಯ್ಯರಾಗಿ ಇತಿಹಾಸದಲ್ಲಿ ದಾಖಲಾಗಿ ಎಂದು ಹೆಚ್​ಡಿಕೆ ಸವಾಲೆಸೆದಿದ್ದಾರೆ.

ಇದನ್ನೂ ಓದಿ:ನೈಸ್ ಹಗರಣದ ತನಿಖೆ ನಡೆಸಲು ಕಾಂಗ್ರೆಸ್ ಕೈಕಟ್ಟಿ ಹಾಕಿತ್ತು ಎಂಬುದು ಸುಳ್ಳು: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details