ಬೆಂಗಳೂರು: ಡಿನ್ನರ್-ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಕೊಂಡು ಆಪರೇಷನ್ ಹಸ್ತದ ಬಗ್ಗೆಯೇ ನಿಮ್ಮ ಸಚಿವರ ಬಳಿ ಅಲವತ್ತುಕೊಳ್ಳುತ್ತಿದ್ದೀರಿ. ಪಂಚರಾಜ್ಯಗಳಿಗೆ ಹಣ ಹೊಂಚಲು ರಾಜ್ಯವನ್ನು ದೋಚುವುದು ಹೇಗೆಂದು ಗುಟ್ಟು ಗುಟ್ಟಾಗಿ ಪಾಠ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರು ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜೆಡಿಎಸ್, ಬಿಜೆಪಿ ಶಾಸಕರು ಹಾಗೂ ಸೋತ ಅಭ್ಯರ್ಥಿಗಳನ್ನು ಆಪರೇಷನ್ ಮಾಡಲು ಗುಳ್ಳೆನರಿಗಳಂತೆ ಅವರ ಮನೆಗಳ ಮುಂದೆ ಕತ್ತಲಾದ ಮೇಲೆ ಹೊಂಚು ಹಾಕಿ ಕೂರುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಕುತ್ತಿಗೆಗೆ ಗ್ಯಾರಂಟಿ ಬೋರ್ಡ್ ತಗಲಾಕ್ಕೊಂಡು ಹಾದಿ ಬೀದಿಯಲ್ಲಿ ಓಡಾಡುತ್ತಿದ್ದೀರಿ. ಐದು ತಿಂಗಳಿಗೆ ಭದ್ರತೆಯ ಗ್ಯಾರಂಟಿ ಇಲ್ಲದೆ ಬಾಲಗ್ರಹಪೀಡಿತ ನಿಮ್ಮ ಸರ್ಕಾರ ಭಿನ್ನಮತ ಪೀಡಿತವಾಗಿದೆ. ಕುರ್ಚಿ ಉಳಿಸಿಕೊಳ್ಳಲು ನೀವೂ ಹೆಣಗಾಡುತ್ತಿದ್ದೀರಿ. ಇದಕ್ಕೆ ಸಿದ್ದರಾಮಯ್ಯನವರೇ ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.
ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ 'ಹೃದಯ ವೈಶಾಲ್ಯತೆ'ಗೆ ನಾನು ಆಭಾರಿ. ರೈತ ಸಾಂತ್ವನ ಯಾತ್ರೆಯನ್ನು ಸ್ವಾಗತ ಮಾಡಿರುವ ನಿಮ್ಮ 'ದೊಡ್ಡ' ಗುಣವನ್ನು ಮನಸಾರೆ ಕೊಂಡಾಡುತ್ತೇನೆ. ಜೆಡಿಎಸ್ನಲ್ಲಿ ಸಲ್ಲಿಸಲಿರುವ ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ. ಬಹಳ ಸಂತೋಷ. ರೈತ ಸಾಂತ್ವನ ಯಾತ್ರೆಯ ಅನುಭವವನ್ನು ಕೇಂದ್ರದ ಜೊತೆಗೂ ಹಂಚಿಕೊಳ್ಳುತ್ತೇವೆ. ನಿಮಗೆ ಸಂಶಯ ಬೇಡ. ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತಿದೆ? ಅದಕ್ಕೆ ನಿಮ್ಮ ನೇತೃತ್ವದ ಸರ್ಕಾರ ಎಷ್ಟು ಗಂಭೀರ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ. ಬರದ ಜೊತೆಗೆ, ವಿದ್ಯುತ್ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರ್ಕಾರದ 'ಅಪರಿಮಿತ ಅಸಡ್ಡೆ'ಯನ್ನು ಅರಿಯದಷ್ಟು ಮುಗ್ಧನೇ ನಾನು? ಎಂದು ಪ್ರಶ್ನಿಸಿದ್ದಾರೆ.