ಬೆಂಗಳೂರು: ಅನಾರೋಗ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಣಮುಖರಾಗಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಕಳೆದ ಬುಧವಾರ ಬೆಳಗಿನ ಜಾವ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ವಿಶೇಷ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ಇದೀಗ ಆರೋಗ್ಯವಾಗಿದ್ದು, ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ತಮ್ಮ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ ಗಣ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ವೈದ್ಯರು ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಆಸ್ಪತ್ರೆಯ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಗಣ್ಯರ ಭೇಟಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್‌ಡಿಕೆ ಅವರನ್ನು ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರ್.ಅಶೋಕ್, ಸಂಸದರಾದ ಪ್ರಜ್ವಲ್ ರೇವಣ್ಷ, ಪ್ರತಾಪ್ ಸಿಂಹ, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀ ಸೇರಿದಂತೆ ಹಲವು ಗಣ್ಯರು ಭೇಟಿಯಾಗಿದ್ದು, ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದರು.
ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.