ಕರ್ನಾಟಕ

karnataka

ETV Bharat / state

'ಸಿದ್ದರಾಮಯ್ಯಗೆ ನಾನು ರಾಜಕೀಯ ವಿಲನ್'.. ಡಿಕೆಶಿ ಸವಾಲು ಸ್ವೀಕರಿಸುತ್ತೇನೆ ಎಂದ ಹೆಚ್ ​ಡಿ ಕುಮಾರಸ್ವಾಮಿ

ಡಿ.ಕೆ. ಶಿವಕುಮಾರ್​ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಬಹಿರಂಗ ಚರ್ಚೆಗೆ ನನ್ನ ಒಪ್ಪಿಗೆ ಇದೆ ಎಂದು ಹೆಚ್.ಡಿ‌. ಕುಮಾರಸ್ವಾಮಿ ಹೇಳಿದರು.

HD Kumaraswamy talks against DK Shivakumar
'ಬಹಿರಂಗ ಚರ್ಚೆಗೆ ನಾನು ಸಿದ್ಧ'.. ಡಿಕೆಶಿ ಸವಾಲು ಸ್ವೀಕರಿಸಿದ ಹೆಚ್​ಡಿಕೆ

By ETV Bharat Karnataka Team

Published : Oct 26, 2023, 12:03 PM IST

Updated : Oct 26, 2023, 2:53 PM IST

'ಸಿದ್ದರಾಮಯ್ಯಗೆ ನಾನು ರಾಜಕೀಯ ವಿಲನ್'.. ಡಿಕೆಶಿ ಸವಾಲು ಸ್ವೀಕರಿಸುತ್ತೇನೆ ಎಂದ ಹೆಚ್ ​ಡಿ ಕುಮಾರಸ್ವಾಮಿ

ಬೆಂಗಳೂರು: ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಹೆಚ್.ಡಿ‌. ಕುಮಾರಸ್ವಾಮಿಗೆ ಸವಾಲು ಹಾಕಿದ್ದರು. ಇದೀಗ ಈ ಸವಾಲನ್ನು ಸ್ವೀಕರಿಸಿರುವ ಹೆಚ್​ಡಿಕೆ, ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಅವರು, "ಡಿ. ಕೆ. ಶಿವಕುಮಾರ್​ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಬಹಿರಂಗ ಚರ್ಚೆಗೆ ನನ್ನ ಒಪ್ಪಿಗೆ ಇದೆ. ನಾನು ಪಲಾಯನ ಮಾಡುವುದಿಲ್ಲ. ನನ್ನ ಬಳಿ ಸಾಕಷ್ಟು ಸರಕು ಇದೆ. ಚರ್ಚೆ ಮಾಡೋಣ ಬನ್ನಿ. ಡಿಕೆಶಿ ಹೇಳಿಕೆಯನ್ನು ನಾನು ಸ್ವಾಗತಿಸಿದ್ದೇನೆ" ಎಂದರು.

"ಅಧಿಕಾರ ತಿರುಗುತ್ತಾ ಇರುತ್ತದೆ. ಬ್ರಾಂಡ್​ ಬೆಂಗಳೂರು ಕಸದ ರಾಶಿ. ಬಿಡದಿಯಲ್ಲಿ ಎಷ್ಟು ಕೈಗಾರಿಕೆಗಳಿವೆ ಹೇಳಿ? ಬೆಂಗಳೂರು ಡೈರಿಗಾಗಿ ಭೂಮಿ ವಶಪಡಿಸಿಕೊಂಡರೆ ಅಲ್ಲಿ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಿ? ನೀವು ಮತ್ತು ನಿಮ್ಮ ಪಟಾಲಮ್​ ಎಷ್ಟು ಲೂಟಿ ಮಾಡಿದ್ರಿ. ನಿಮ್ಮ ಪ್ರಜ್ಞಾವಂತಿಕೆ ನಮಗೆ ಬೇಡಪ್ಪ. ಅಧಿಕಾರ ಶಾಶ್ವತ ಅಲ್ಲ ಮಿಸ್ಟರ್​ ಡಿ.ಕೆ. ಶಿವಕುಮಾರ್​" ಎಂದು ವಾಗ್ದಾಳಿ ನಡೆಸಿದರು.

ಪ್ರಮಾಣ ಮಾಡಿ.. "ವರ್ಗಾವಣೆಯಲ್ಲಿ ಯಾವುದೇ ಹಣ ಪಡೆದಿಲ್ಲ ಎಂದು ಸಿಎಂ, ಡಿಸಿಎಂ ಹಾಗೂ ಎಲ್ಲಾ ಮಂತ್ರಿಗಳು ಬಂದು ಪ್ರಮಾಣ ಮಾಡಿ. ಕಳೆದ ಐದು ತಿಂಗಳಲ್ಲಿ ಯಾವುದೇ ವರ್ಗಾವಣೆಯಲ್ಲಿ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿ. ನಾನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇನೆ. ಹಳೇ ವಿಚಾರ ಬೇಡ. ಈ 5 ತಿಂಗಳಲ್ಲಿ ಲಂಚ ಪಡೆದಿಲ್ಲವೆಂದು ಪ್ರಮಾಣ ಮಾಡಲಿ. ಧರ್ಮಸ್ಥಳ ಬೇಡ ಅಂದರೆ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗೋಣ ಬನ್ನಿ" ಎಂದು ಮಾಗಡಿ ಶಾಸಕರಿಗೆ ಸವಾಲು ಹಾಕಿದರು.

"ನೀವು ದೊಡ್ಡ ಆಲಹಳ್ಳಿಯಲ್ಲಿ ಏನೇನು ಮಾಡಿದ್ದೀರಾ ಅಂತ ಗೊತ್ತಿದೆ. ನಾನು ಒಂದು ಬಾರಿ ತಪ್ಪು ಮಾಡಿದ್ದೇನೆ. ಅದನ್ನು ಒಪ್ಪಿಕೊಂಡಿದ್ದೇನೆ. ನಾನು ನಿಮ್ಮ ರೀತಿ ಕೆಲಸ ಮಾಡಿಲ್ಲ. ನಾನು ಮೈತ್ರಿ ಸರ್ಕಾರ ಮಾಡಿದಾಗ ವಸತಿ ಇಲಾಖೆಗೆ ಸಂಬಂದಪಟ್ಟ ವಿಚಾರ ಹೇಳುತ್ತೇನೆ. ಚುನಾವಣೆಗೆ ಮುಂಚೆ 15 ಲಕ್ಷ ಮನೆ ಕಟ್ಟುವುದಕ್ಕೆ ಆದೇಶ ಪ್ರತಿ ಹೊರಡಿಸಿದ್ದರು. 2018 ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡಿದ್ದು, 2700 ಕೋಟಿ ರೂ. ಬಜೆಟ್​ನಲ್ಲಿ ಇಟ್ಟಿದ್ದರು. ನಾನು ಅಧಿಕಾರ ಸ್ವೀಕಾರ ಮಾಡಿದಾಗ 29 ಸಾವಿರ ಕೋಟಿ ರೂ. ಕಮಿಟ್​ಮೆಂಟ್ ಇತ್ತು. ಆದರೆ, ಅದಕ್ಕೆ ಫೈನಾನ್ಸ್ ಅಪ್ರುವಲ್ ಆಗಿರಲಿಲ್ಲ. 1500 ಕೋಟಿ ರೂ. ದುಡ್ಡು ಯಾರು ಕೊಡುತ್ತಿದ್ದರು. ಫೈನಾನ್ಸ್ ಅಪ್ರುವಲ್ ಇಲ್ಲ. 1500 ಕೋಟಿ ರೂ.ನಲ್ಲಿ ಎಷ್ಟು ವಸೂಲಿ ಮಾಡಿದ್ದಿರಾ? ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಪಾಪ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದರು.

ಇದನ್ನೂ ಓದಿ:ನ.1ರ ಬಳಿಕ ಯಾವ ದಿನವಾದರೂ ಸರಿ, ಬಹಿರಂಗ ಚರ್ಚೆಗೆ ಸಮಯ ಫಿಕ್ಸ್​ ಮಾಡಿ; ಡಿಕೆಶಿ

"ಕನಕಪುರದಲ್ಲಿ ಹೊಸ ಬ್ರಿಡ್ಜ್ ಕಟ್ಟಿದ್ದು ನಾನು. ಅಭಿವೃದ್ಧಿಗೆ ಪಿ.ಜಿ.ಆರ್. ಸಿಂಧ್ಯಾ ಅವರ ಸಹಕಾರ ಇರಲಿಲ್ಲ. ರಾಮನಗರ ಕನಕಪುರ ರಸ್ತೆಯಲ್ಲಿ ಬರಿ ಗುಂಡಿಗಳಿತ್ತು. ಇದನ್ನು ಅಭಿವೃದ್ಧಿ ‌ಮಾಡಿದವರು ಯಾರು. ಬಿಜೆಪಿ ‌ಜೆಡಿಎಸ್ ಮೈತ್ರಿಯಿದ್ದಾಗ ಅಭಿವೃದ್ಧಿ ಹೆಚ್ಚು ಆಗಿದೆ. ಹೊಸಕರೆಹಳ್ಳಿಯಲ್ಲಿ 8 ಎಕರೆ ಜಾಗವನ್ನು ನೈಸ್​ಗೆ ನೋಟಿಫೈ ಆಗಿತ್ತು. ಆದರೆ ಇದನ್ನು ಶೋಭಾ ಡೆವಲಪರ್​ಗೆ ಕೊಡಲಾಗುತ್ತದೆ. ಅಲ್ಲೆಲ್ಲಾ ಕಟ್ಟಿಯಾಗಿದೆ. ಎಷ್ಟು ತಗೊಂಡ್ರೋ ಎನೋ. ಇವರು ರಿಯಲ್ ಎಸ್ಟೇಟ್ ಮಾಡ್ತಿರೋದು, ರಸ್ತೆಯಲ್ಲ. ತಾವರೆಕೆರೆಯ ಡಿಎಲ್​ಎಫ್ 300 ಎಕರೆ ಜಾಗದ ಕಥೆ ಏನು?" ಎಂದು ಪ್ರಶ್ನೆ ಮಾಡಿದ ಹೆಚ್​ಡಿಕೆ, ಮುಂದೆ ಎಲ್ಲವನ್ನೂ ತೆರೆದಿಡುತ್ತೇನೆ ಎಂದು ಹೇಳಿದರು.

"ತಂದೆಯವರ ಹತ್ತಿರ ಪಂಚೆ, ಜುಬ್ಬಾ ಬಿಟ್ಟರೇ ಬೇರೆ ಏನಿಲ್ಲ. ನಾವು ಹಣ ಮಾಡಿದ್ದೇವೆ. ಬದುಕಲು ಬೇಕಲ್ವಾ?. ಆದರೆ, ಸರ್ಕಾರದ ಹಣ ಲೂಟಿ ಹೊಡೆದು ಹಣ ಮಾಡಿಲ್ಲ. ನಾನು ಚಾಲೆಂಜ್ ತೆಗೆದುಕೊಳ್ತೀನಿ. ನನಗೆ ಆ ಜಿಲ್ಲೆ ಭಾವನಾತ್ಮಕ ಸಂಬಂಧ. ವ್ಯವಹಾರಿಕರ ಸಂಬಂಧ ಅಲ್ಲ. ಹಾಗೇನಾದ್ರೂ ಹೆಸರು ಬದಲಾಯಿಸಿದ್ರೆ ಅಮರಣಾಂತ ಉಪವಾಸ ಮಾಡುತ್ತೇನೆ. ನನ್ನ ಆರೋಗ್ಯದ ಬಗ್ಗೆಯೂ ನಾನು ಚಿಂತಿಸಲ್ಲ. ಕೊನೆ ಕ್ಷಣದವರೆಗೂ ನಾನು ಉಪವಾಸ ಮಾಡ್ತೀನಿ" ಎಂದು ಎಚ್ಚರಿಕೆ ನೀಡಿದರು.

"ಕೆಂಪೇಗೌಡರ ಹೆಸರೇಳಲು ಯಾವ ನೈತಿಕತೆ ಇದೆ. ಯಾವ ಮುಖ ಹೊತ್ತುಕೊಂಡು ಅವರ ಹೆಸರು ಹೇಳ್ತೀರಾ?. ಎಷ್ಟು ಕೆರೆ ಕಟ್ಟೆ ನುಂಗಿ ಹಾಕಿದ್ದೀರಾ? ಎಂದು ಗುಡುಗಿದರು.

"ಹೊಸಕೆರೆ ಹಳ್ಳಿಯ ಬಳಿಯ ಕೆಐಎಡಿಬಿ ಸ್ವಾಧೀನ ಆಗಿದ್ದ ಎಂಟು ಎಕರೆ ಜಮೀನನ್ನು ಕಾನೂನು ವಿರೋಧವಾಗಿ ನೋಂದಣಿ ಮಾಡಿಕೊಂಡಿದ್ದೀರಿ" ಎಂದು ಡಿಕೆ ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

"ಸಿದ್ದರಾಮಯ್ಯ ಅವರಿಗೆ ನಾನು ರಾಜಕೀಯ ವಿಲನ್​. ಅದು ನಿಜವೇ. ನಾನು ಅವರಿಗೆ ಸ್ನೇಹಿತ ಎಂದು ಹೇಳೋದಿಕ್ಕೆ ಆಗೋದಿಲ್ಲ" ಎನ್ನುವ ಮೂಲಕ ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ ಎಂಬ ಸಿದ್ದರಾಮಯ್ಯ ಹೇಳಿಕೆಗೂ ಹೆಚ್​ಡಿಕೆ ತಿರುಗೇಟು ನೀಡಿದ್ದಾರೆ.

"ನಾನು ಸಿಎಂ ಆಗಿದ್ದಾಗ ನೋವು ಅನುಭವಿಸಿಕೊಂಡು ಬಂದೆ. ಬಿಜೆಪಿ ಮೇಲೆ ಆರೋಪ ಮಾಡಿದ್ದೆ. ಅದಕ್ಕೆ ಬಿತ್ತನೆ ಹಾಕಿದ್ದು ಯಾರು? ಜೆಡಿಎಸ್​ ಬಿಜೆಪಿ ಬಿ ಟೀಮ್​ ಎಂದವರು ಮನೆ ಬಾಗಿಲಿಗೆ ಬಂದಿದ್ದು ಯಾರು? ಆರ್ಥಿಕ ವಿಚಾರ ಸಂಬಂಧ ಸಿಎಂ ಶ್ವೇತಪತ್ರ ಹೊರಡಿಸಲಿ" ಎಂದು ಆಗ್ರಹಿಸಿದರು.

ಇದನ್ನೂ ಓದಿ:'ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು, ಬನ್ನಿ ಬಹಿರಂಗ ಚರ್ಚೆಗೆ': ಹೆಚ್‌ಡಿಕೆಗೆ ಡಿಕೆಶಿ ಸವಾಲು

Last Updated : Oct 26, 2023, 2:53 PM IST

ABOUT THE AUTHOR

...view details