ಬೆಂಗಳೂರು: ಕೇಂದ್ರದ ಗೃಹ ಸಚಿವರು ದೇಶದಲ್ಲಿ ಹಲವಾರು ಭಾಷೆಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಒಂದು ಕಡೆ ಹೇಳುತ್ತಾರೆ ರಾಷ್ಟ್ರವನ್ನು ಒಂದು ಮಾಡಬೇಕೆಂದು. ಆದರೆ, ಭಾಷೆಗಳನ್ನು ನಾಶ ಮಾಡಿ ಒಂದು ರಾಷ್ಟ್ರ ಕಟ್ಟೋಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಕೇಂದ್ರದ ಧೋರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. 120 ದೇಶಗಳ ಪೈಕಿ ಬಡತನದಲ್ಲಿ ನಮ್ಮ ದೇಶ 104 ನೇ ಸ್ಥಾನದಲ್ಲಿದೆ. ದೇಶದಲ್ಲಿ ಇರುವ ಸಮಸ್ಯೆ ಬಗೆಹರಿಸಿ ಮೊದಲು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾಷೆ ವಿಷಯದಲ್ಲಿ ಸಮಸ್ಯೆ ಆದರೆ ನಮ್ಮಲ್ಲಿರುವ ಕನ್ನಡ ಸಂಘ ಸಂಸ್ಥೆ ಜೊತೆಗೆ ನಮ್ಮ ಪಕ್ಷ ಕೂಡ ಕೈಜೋಡಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು. ಎರಡೂ ರಾಷ್ಟ್ರೀಯ ಪಕ್ಷಗಳು ದೇಶಕ್ಕೆ ಮಾರಕ. ಒಂದೇ ನಾಣ್ಯದ ಎರಡೂ ಮುಖ. ಒಂದೆಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಇನ್ನೊಂದು ಕಡೆ ಭಾಷೆಯ ದಬ್ಬಾಳಿಕೆ ಪ್ರಾರಂಭ ಆಗಿದೆ. ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಬಾಗಿಲು ಹಾಕಿದ್ದಾರೆ. ಕರ್ನಾಟಕದಲ್ಲೂ ಬಹಳ ದೂರ ಇಲ್ಲ ಎಂದು ಕುಮಾರಸ್ವಾಮಿ ಹರಿಹಾಯ್ದರು.
ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಸಮ್ಮಿಶ್ರ ಸರ್ಕಾರದಲ್ಲಿ ನಾವು ನಾಗಮೋಹನ್ ದಾಸ್ ಸಮತಿ ರಚನೆ ಮಾಡಿದೆವು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಬಿಜೆಪಿಯವರು ನಾವು ಇಂಪ್ಲಿಮೆಂಟ್ ಮಾಡಿದ್ದೇವೆ ಅಂತಾರೆ. ಸಚಿವ ಶ್ರೀರಾಮುಲು ಎದೆ ಬಡಿದುಕೊಂಡು ಮಾತನಾಡ್ತಿದ್ರು. ಒಬ್ಬ ಶಾಸಕರು ನಾವು ಬದುಕಿರುವವರೆಗೂ, ನಿಮಗೂ ಬಿಜೆಪಿಗೆ ಗುಲಾಮರಾಗಿರುತ್ತೇವೆ ಅಂತಾರೆ. ಶಾಸಕರಾಗಲು ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ನಾಗಮೊಹನ್ ದಾಸ್ ವರದಿ ಯಾವ ವರ್ಷದಲ್ಲಿ ಕೊಟ್ಟಿದ್ರು.
ಹಾಗಾದರೆ ಒಂದೂವರೆ ವರ್ಷ ಯಾಕೆ ವರದಿಯನ್ನು ಕೊಡದೆ ಸ್ಟೊರೇಜ್ನಲ್ಲಿ ಇಟ್ಟಿದ್ರು. ಆಗಲೇ ವರದಿ ಕೊಡಬಹುದಿತ್ತಲ್ಲವೇ?. ಇದು ಚುನಾವಣೆಗೆ ಗಿಮಿಕ್ ಮಾಡಿಕೊಂಡು ಹೋಗ್ತಿದ್ದಾರೆ. ನಾನು ಟೆಕ್ನಿಕಲ್ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಸಮಾಜದ ಮೂಲ ಸಮಸ್ಯೆಗಳನ್ನು ಕಂಡುಕೊಳ್ಳಬೇಕು. ಸರ್ಕಾರದ ಕಾರ್ಯಕ್ರಮ ಜನರಿಗೆ ತಲುಪಬೇಕು ಎಂದರು.
ಹಿರಿಯ ಮುಖಂಡ ಹೆಚ್.ವಿಶ್ವನಾಥ್ ಹೇಳಿಕೆ ಗಮನಿಸಿದ್ದೇನೆ. ಮೀಸಲಾತಿ ಯಾರು ಪಡಿತಿದ್ದಾರೆ?. ಅವರು ಹೇಳಿದ್ದು ನಿಜಾನೇ. ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಎಷ್ಟೋ ಜನರಿಗೆ ಮೀಸಲಾತಿ ತಲುಪುತ್ತಿಲ್ಲ. ಅವರಿಗೆ ಮೀಸಲಾತಿ ತಲುಪಬೇಕು. ಮೀಸಲಾತಿಯಿಂದ ಹೊರಗಡೆ ಇರುವವರಿಗೆ ಮೀಸಲಾತಿ ತಲುಪಬೇಕು ಎಂದು ಅಭಿಪ್ರಾಯಪಟ್ಟರು. ಹೆಬ್ಬಾಳ ಸ್ಟೀಲ್ ಬ್ರಿಡ್ಜ್ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ನಾವು ಫ್ಲೈ ಓವರ್ಗೆ ರೂಪುರೇಷೆ ಮಾಡಿದ್ದೆವು. ಫೆರಿಪರಲ್ ರಿಂಗ್ ರೋಡ್ ಗೆ ಸಿದ್ಧತೆ ನಡೆಸಿದ್ದೆವು. ಕೊರಿಯಾ ಕಂಪನಿ ನಾವೇ ಮಾಡ್ತೇವೆಂದು ಮುಂದೆ ಬಂದಿತ್ತು. ಆಗ ಬಿಜೆಪಿಯವರು ಅದನ್ನು ಮಾಡಲು ಬಿಡಲಿಲ್ಲ. ಸ್ಟೀಲ್ ಬ್ರಿಡ್ಜ್ ಗೆ ಬಿಜೆಪಿಯವರೇ ವಿರೋಧಿಸಿದ್ರು. ಈಗ ಅವರೇ ಮಾಡೋಕೆ ಹೊರಟಿದ್ದಾರೆ. ಇದು ಎಂತಹ ವಿಪರ್ಯಾಸ ನೋಡಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಬರೀ ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪಂಚರತ್ನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಐದು ವರ್ಷ ಅಧಿಕಾರ ಕೊಟ್ಟರೆ ಐದು ಕಾರ್ಯಕ್ರಮ ಹೇಗೆ ಕೊಡಬೇಕು ಎಂಬುದರ ಬಗ್ಗೆ ತಯಾರಿ ಮಾಡುತ್ತಿದ್ದೇವೆ. ನವಂಬರ್ 1 ರಂದು ಪಂಚರತ್ನ ಯಾತ್ರೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಿದ್ಧತೆ ಮಾಡ್ತಿದ್ದೇನೆ. ಅಕ್ಟೋಬರ್ 18 ಹಾಗೂ 19ರಂದು ಶಾಸಕರ ಹಾಗೂ ಸದಸ್ಯರ ಸಭೆ ಕರೆದಿದ್ದೇವೆ. ನವಂಬರ್ 1ರಂದು ವಿಶೇಷವಾಗಿ ಕನ್ನಡ ಬಾವುಟವನ್ನು ಮನೆ ಮನೆಗೆ ಹಾರಿಸುವ ವಿಚಾರಕ್ಕೆ ಸಭೆ ಕರೆದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ರಮೇಶ್ ಜಾರಕಿಹೊಳಿ ಜೆಡಿಎಸ್ ಜೊತೆಗೆ ಚರ್ಚೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ ಅವರು, ನಾನು ಯಾರ ಜೊತೆಗೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿನ್ನೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಾಲಕಿಯ ಮನೆಗೆ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಹಾಗೆಯೇ 50 ಸಾವಿರ ರೂಪಾಯಿ ಪರಿಹಾರ ಕೂಡ ನೀಡಿದ್ದಾರೆ. ನಾವು ಹೋದ ಮೇಲೆ ಇಬ್ಬರು ಸಚಿವರು ಕಾಟಾಚಾರಕ್ಕೆ ಹೋಗಿ ಕಣ್ಣು ಒರೆಸುವ ತಂತ್ರ ಮಾಡಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಡಿಕೆ ಆಗ್ರಹಿಸಿದರು.
ಇದನ್ನೂ ಓದಿ:ಪ್ರಧಾನಿ ಮೋದಿ ಜಾತಿ ದಾಖಲೆ ಸುಳ್ಳು, ಬಿಜೆಪಿ ಗಲೀಜು ಪಕ್ಷ.. ಜೆಡಿಯು ಅಧ್ಯಕ್ಷ ಟೀಕೆ