ಬೆಂಗಳೂರು : ಹುಟ್ಟೂರು ಸೇರಬೇಕೆಂಬ ಆಸೆಯೊಂದಿಗೆ ಹಸಿವಿನಲ್ಲೇ ರಾಯಚೂರಿನತ್ತ ಹೆಜ್ಜೆ ಹಾಕುತ್ತಿದ್ದ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಎಂಬುವರು ಮಾರ್ಗ ಮಧ್ಯೆ ಅನ್ನಾಹಾರವಿಲ್ಲದೇ, ಸಕಾಲಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟರೆಂಬ ಸುದ್ದಿ ತೀವ್ರ ನೋವುಂಟು ಮಾಡಿತು. ಗಂಗಮ್ಮ ಅವರ ಈ ಪ್ರಕರಣ ವಲಸೆ ಕಾರ್ಮಿಕರು, ಕೂಲಿಕಾರ್ಮಿಕರ ಬದುಕನ್ನು ಸಾಕ್ಷಿಕರಿಸುವಂತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಗಂಗಮ್ಮ ಪ್ರಕರಣದಲ್ಲಿ ಕೂಲಿ ನೀಡದ ಗುತ್ತಿಗೆದಾರನೊಬ್ಬನದ್ದೇ ತಪ್ಪಿಲ್ಲ. ಸರ್ಕಾರದ್ದೂ ತಪ್ಪಿದೆ. ಕಾರ್ಮಿಕರ ಇಲಾಖೆಯಲ್ಲಿ 8000 ಕೋಟಿ ರೂ. ಹಣವಿದೆ. ಆದರೆ ಇಂತವರಿಗೆ ವಿನಿಯೋಗವಾಗುತ್ತಿಲ್ಲವೇಕೆ? ಆಕೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರಾಶ್ರಿತರ ಕ್ಯಾಂಪ್‌ನಲ್ಲಿ ಇರಿಸಿತ್ತಂತೆ. ಕ್ಯಾಂಪ್‌ನಲ್ಲಿದ್ದೂ ಆಕೆಗೆ ಆಹಾರ, ಚಿಕಿತ್ಸೆ ಸಿಗಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.