ಬೆಂಗಳೂರು :ನಾಡಗೀತೆಯನ್ನು ವಿರೂಪಗೊಳಿಸಿರುವುದನ್ನು ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರನ್ನು ಮೊದಲು ಒದ್ದು ಒಳಕ್ಕೆ ಹಾಕಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಡಗೀತೆಯನ್ನ ಅಪಮಾನಗೊಳಿಸಲಾಗಿದೆ. ಈ ರೀತಿ ಅವಮಾನ ಮಾಡಿರುವನನ್ನ ಒದ್ದು ಒಳಗೆ ಹಾಕಬೇಕಿತ್ತು. ಯಾವಾಗ ಪುಸ್ತಕ ಬಿಡುಗಡೆಯಾಗುತ್ತೋ ಅಂತಾ ಕಾಯುತ್ತಿದ್ದೇನೆ. ಪಠ್ಯದಲ್ಲಿ ಕುವೆಂಪು ಹಲವರ ಪ್ರೋತ್ಸಾಹದಿಂದ ಕವಿಗಳಾಗಿದ್ದಾರೆಂಬ ಅಂಶ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಚಕ್ರತೀರ್ಥ ವಿರುದ್ಧ ಹೆಚ್ಡಿಕೆ ಕಿಡಿ ಯಾವನ್ ರೀ ಅವನು, ಆ ಕಮಿಟಿಯಲ್ಲಿ ಇರುವವನು?. ಅವನ ಹಿನ್ನೆಲೆ ಏನು? ಎಂದು ರೋಹಿತ್ ಚಕ್ರತೀರ್ಥ ವಿರುದ್ಧ ವಾಗ್ದಾಳಿ ನಡೆಸಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ. ಈ ಕುರಿತು ಎಚ್ಚರಿಕೆ ಕೊಡುತ್ತೇನೆ. ರಾಷ್ಟ್ರಕವಿ ಕುವೆಂಪು ಬಗ್ಗೆ ಅವಹೇಳನ ಮಾಡಲಾಗಿದೆ. ಕುವೆಂಪು ಇದ್ದಾಗ ಇವನು (ರೋಹಿತ್ ಚಕ್ರತೀರ್ಥ) ಹುಟ್ಟಿದ್ದನೋ ಇಲ್ಲವೋ? ಎಂದು ವಾಗ್ದಾಳಿ ನಡೆಸಿದರು.
ಕುವೆಂಪು ಬಗ್ಗೆ ಬರಗೂರು ರಾಮಚಂದ್ರಪ್ಪ ಸಮಿತಿ ಆ ಅಂಶವನ್ನು ಸೇರ್ಪಡೆಗೊಳಿಸಿತ್ತು ಎಂಬ ಪ್ರಶ್ನೆಗೆ ಯಾರೇ ಆಗಿರಲಿ. ತಪ್ಪು ಮಾಡಿದ್ರೆ ಅದನ್ನು ಸರಿಪಡಿಸಬೇಕು. ಯಾರೇ ತಪ್ಪು ಮಾಡಿದ್ದರೂ ಮೊದಲು ಅದನ್ನ ಸರಿಪಡಿಸಬೇಕು. ಯಾವುದೇ ಕವಿಗಳ ಬಗ್ಗೆ ಈ ರೀತಿ ಬರೆದಿದ್ದರೆ ಅದನ್ನು ವಾಪಸ್ ಪಡೆಯಬೇಕು.
ನಾರಾಯಣ ಗುರುಗಳಿಗೆ ಅಪಮಾನ ಮಾಡಿದ್ದರೂ ಸರಿಪಡಿಸಬೇಕು. ಇಲ್ಲದೇ ಇದ್ದರೇ ಕರ್ನಾಟಕದಲ್ಲಿ ಬಿಜೆಪಿ ನೆಲೆ ಕಳೆದುಕೊಳ್ಳಲಿದೆ. ದಕ್ಷಿಣದ ಹೆಬ್ಬಾಗಿಲು ಕರ್ನಾಟಕದ ಬಾಗಿಲು ಬಿಜೆಪಿಗೆ ಬಂದ್ ಆಗಲಿದೆ ಎಂದು ಎಚ್ಚರಿಕೆ ನೀಡಿದರು.