ಬೆಂಗಳೂರು: ಸುಸ್ತು ಮತ್ತು ತೀವ್ರ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದಿದೆ. ಅವರನ್ನು ತೀವ್ರ ನಿಗಾ ಘಟಕದಿಂದ ಸ್ಪೆಷಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಎಂದಿನಂತೆ ಪತ್ರಿಕೆ ಓದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕುಮಾರಸ್ವಾಮಿ ಅವರನ್ನು ಇಂದು ವಾರ್ಡ್ಗೆ ಶಿಫ್ಟ್ ಮಾಡಿದ್ದು, ಎರಡು ದಿನ ವಾರ್ಡ್ನಲ್ಲಿ ವೈದ್ಯರು ನಿಗಾ ವಹಿಸಲಿದ್ದಾರೆ. ಪ್ರಸ್ತುತ ಯಾರನ್ನೂ ಭೇಟಿ ಮಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ. ನಾಳೆ ಅಥವಾ ನಾಡಿದ್ದು ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇನ್ನು ವಿದೇಶ ಪ್ರವಾಸದಲ್ಲಿದ್ದ ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ವಾಪಸ್ ಆಗಿದ್ದು, ಆಸ್ಪತ್ರೆಗೆ ತೆರಳಿ ತಂದೆಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಅದೇ ರೀತಿ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತಿತರ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ:ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಸ್ಥಿರ: ಅಪೋಲೋ ಆಸ್ಪತ್ರೆ
ತಂದೆ ಶೀಘ್ರವೇ ಮನೆಗೆ ಮರಳಲಿದ್ದಾರೆ- ನಿಖಿಲ್:ತಂದೆ ಕುಮಾರಸ್ವಾಮಿ ಆರೋಗ್ಯದ ಕುರಿತು ಪುತ್ರ ನಿಖಿಲ್ ಕುಮಾರಸ್ವಾಮಿ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಬರೆದುಕೊಂಡಿದ್ದಾರೆ. "ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯವರು ಈಗ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಅವರನ್ನು ಈಗ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದ್ದು, ಶೀಘ್ರವೇ ಮನೆಗೆ ಮರಳಲಿದ್ದಾರೆ. ಕೆಲ ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
ಅಲ್ಲದೇ, "ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ಅಭಿಮಾನಿಗಳು ಯಾರು ಕೂಡ ಆತಂಕ ಪಡಬೇಕಿಲ್ಲ. ತಂದೆಯವರು ಕ್ಷೇಮವಾಗಿದ್ದು, ಕೆಲ ದಿನಗಳಲ್ಲಿಯೇ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ತಂದೆಯವರ ಆರೋಗ್ಯ ಚೇತರಿಕೆಗಾಗಿ ಪ್ರೀತಿ, ವಾತ್ಸಲ್ಯದಿಂದ ಪ್ರಾರ್ಥನೆ ಮಾಡಿದ ಎಲ್ಲ ಕಾರ್ಯಕರ್ತ ಬಂಧುಗಳು, ನಾಡಿನ ಜನರಿಗೆ ನನ್ನ ವಂದನೆಗಳು. ಹಾಗೆಯೇ, ತಂದೆಯವರ ಆರೋಗ್ಯ ವಿಚಾರಿಸಿದ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳವರಿಗೆ ಹಾಗೂ ಕ್ಷೇಮ ವಿಚಾರಿಸಿದ ಹಲವಾರು ಪಕ್ಷಗಳ ಹಿರಿಯ ನಾಯಕರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಅನಾರೋಗ್ಯದ ಹಿನ್ನೆಲೆ ಮಾಜಿ ಸಿಎಂ ಹೆಚ್ಡಿಕೆ ಆಸ್ಪತ್ರೆಗೆ ದಾಖಲು.. ಕೋಲಾರ ಭೇಟಿ ರದ್ದು