ಬೆಂಗಳೂರು: ಜೆಡಿಎಸ್ ರಾಜ್ಯ ಘಟಕವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಲಾಗಿದ್ದು ಹಂಗಾಮಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು, ಸದಸ್ಯರು, ಶಾಸಕರು ಒಳಗೊಂಡಂತೆ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಜೆಡಿಎಸ್ ರಾಜ್ಯ ಘಟಕ ವಿಸರ್ಜನೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರಾಗಿದ್ದು ವಜಾಗೊಂಡ ಸಿ.ಎಂ.ಇಬ್ರಾಹಿಂ ಅಧಿಕಾರ ಕಳೆದುಕೊಂಡಿದ್ದಾರೆ. ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆದ ಹೆಚ್.ಡಿ.ದೇವೇಗೌಡರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ರಾಜ್ಯ ಘಟಕವನ್ನು ವಿಸರ್ಜನೆ ಮಾಡಲಾಗಿದೆ. ಪಕ್ಷದ ಕಾರ್ಯ ಚಟುವಟಿಕೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಹಾಗೂ ಮುಂದಿನ ಚುನಾವಣೆವರೆಗೂ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಹಂಗಾಮಿ (ಅಡ್ ಹಾಕ್) ರಾಜ್ಯಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.
ರಾಜ್ಯ ಘಟಕದ ಕಾರ್ಯದರ್ಶಿಯಾಗಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕಾರ್ಯ ನಿರ್ವಹಿಸಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರ ಜತೆ ಕಾರ್ಯನಿರ್ವಹಿಸಲು ಇನ್ನು ಮೂರು ದಿನದಲ್ಲಿ ಕೆಲವು ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡುವುದಾಗಿ ದೇವೇಗೌಡರು ತಿಳಿಸಿದರು.
ಸಿ.ಎಂ.ಇಬ್ರಾಹಿಂ ಅವರ ಬಗ್ಗೆ ಯಾವ ತೀರ್ಮಾನ ಮಾಡಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌಡರು, ರಿಮೂವ್ ಮಾಡಲಾಗಿದೆ. ನೀವು ರಾಜ್ಯ ಘಟಕ ವಿಸರ್ಜನೆ ಮಾಡಲಾಗಿದೆ ಎಂದು ಭಾವಿಸಬಹುದು ಎಂದು ಹೇಳಿದರು. ಕೋರ್ ಕಮಿಟಿಯ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಒಕ್ಕಲಿಗರೇ ಆಗಿದ್ದಾರೆ ಎಂದು ನೀವು ಪ್ರಶ್ನಿಸಬಹುದು. ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಇದೆ. ಅವರ ನಾಯಕತ್ವವನ್ನು ಗುರುತಿಸಲಾಗಿದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ರೈತರ ಸಾಲಮನ್ನಾ, ಜನಪ್ರಿಯ ಕಾರ್ಯಕ್ರಮಗಳು, ಚುನಾವಣಾ ಪೂರ್ವದಲ್ಲಿ ನಡೆದ ಜನತಾ ಜಲಧಾರೆ, ಪಂಚರತ್ನ ಕಾರ್ಯಕ್ರಮಗಳಿಂದ ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದಾರೆ. ಹೀಗಾಗಿ ಪಕ್ಷದ ಎಲ್ಲ ನಾಯಕರು, ಮುಖಂಡರು ಒಟ್ಟಾಗಿ ತೀರ್ಮಾನಿಸಿ ಕುಮಾರಸ್ವಾಮಿ ಅವರೇ ಅಡ್ ಹಾಕ್ ಅಧ್ಯಕ್ಷರಾಗಬೇಕು ಎಂದು ತೀರ್ಮಾನ ಮಾಡಿದ್ದೇವೆ.ರಾಜ್ಯ ಘಟಕ, ರಾಷ್ಟ್ರ ಘಟಕ ಬೇರೆ. ಬೇರೆ ಬೇರೆ ರಾಜ್ಯ ಘಟಕಗಳು ಬೇರೆ. ಕೇರಳ ಘಟಕ ಪಕ್ಷ ಕೈಗೊಳ್ಳುತ್ತಿರುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ. ಕೇರಳ ಘಟಕ ಅಲ್ಲಿನ ಸರ್ಕಾರಲ್ಲಿ ಭಾಗಿಯಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ಮುಖಂಡರ ಕೊರತೆ ಇಲ್ಲ:ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸೇರಿದಂತೆ ಹಲವು ಮುಖಂಡರು ಪಕ್ಷದಲ್ಲಿ ಇದ್ದಾರೆ. ನಮಗೆ ಅಲ್ಪಸಂಖ್ಯಾತ ಮುಖಂಡರ ಕೊರತೆ ಇಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ವಿಧವಾದ ಬೆಳವಣಿಗೆಗಳಿವೆ. ಪಶ್ಚಿಮ ಬಂಗಾಳವೇ ಬೇರೆ, ತ್ರಿಪುರವೇ ಬೇರೆ, ಕರ್ನಾಟಕವೇ ಬೇರೆ. ವಿಧಾನಸಭೆ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ ಪಕ್ಷದಲ್ಲಿನ ವಿವಿಧ ಘಟಕಗಳ ಜವಾಬ್ದಾರಿ, ಸ್ಥಾನಮಾನ ಮಾರ್ಪಡು ಮಾಡಿರಲಿಲ್ಲ. ರಾಜ್ಯ ಘಟಕದ ಅಧ್ಯಕ್ಷರಾಗಿದ್ದವರು ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಬಿಜೆಪಿ ಜೊತೆ ರಾಜ್ಯದಲ್ಲಿ ಹೋಗಬೇಕಾದ ಸನ್ನಿವೇಶವನ್ನು ಮನವರಿಕೆ ಮಾಡಿಕೊಟ್ಟ ನಂತರ ಕೇರಳ ಭಾಗವು ಅಲ್ಲಿನ ಎಡಪಂಥೀಯ ಪಕ್ಷದ ಜತೆ ಕೆಲಸ ಮಾಡಿರುವ ಶಾಸಕರ ಒಪ್ಪಿಗೆಯೂ ದೊರೆತಿದೆ ಎಂದು ದೇವೇಗೌಡರು ವಿವರಿಸಿದರು.
ದೇವೇಗೌಡರು ನೂತನ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಮಾಣ ಪತ್ರ ವಿತರಿಸಿದರು. ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ, ಎ.ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಕೋರ್ ಕಮಿಟಿ ಸದಸ್ಯರಾದ ವೈ.ಎಸ್.ವಿ.ದತ್ತ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಹಲವು ಉಪಸ್ಥಿತರಿದ್ದರು.
ಇದನ್ನೂ ಓದಿ:ಜೆಡಿಎಸ್ ನೂತನ ಅಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕ.. ಸಿ ಎಂ ಇಬ್ರಾಹಿಂ ಸೇರಿ ರಾಜ್ಯ ಕಾರ್ಯಕಾರಿ ಸಮಿತಿ ವಿಸರ್ಜನೆ