ಕರ್ನಾಟಕ

karnataka

ETV Bharat / state

ಪಾದರಾಯನಪುರ ಹಲ್ಲೆ ಖಂಡನೀಯ, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ಹೆಚ್​ಡಿ ಕುಮಾರಸ್ವಾಮಿ - ಪಾದರಾಯನಪುರ ಹಲ್ಲೆ ಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ

ಕೊರೊನಾ ಶಂಕಿತರನ್ನು ಕ್ವಾರಂಟೈನ್​ಗೆ ಕರೆದುಕೊಂಡು ಹೋಗಲು ಬಂದ ಅಧಿಕಾರಿಗಳ ತಂಡದ ಮೇಲೆ ಹಲ್ಲೆ ನಡೆದಿದ್ದು,ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿಯವರು, ಈ ಹಲ್ಲೆ ನಡೆಸಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ
HD Kumaraswamy

By

Published : Apr 20, 2020, 10:49 AM IST

ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್​​ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ, ಬಿಬಿಎಂಪಿ ಸಿಬ್ಬಂದಿ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ಖಂಡನೀಯ. ಅಂಥವರ ವಿರುದ್ಧ ಮುಲಾಜಿಲ್ಲದೆ ಕಾನೂನು ಅಸ್ತ್ರ ಪ್ರಯೋಗಿಸಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ದೇಶದ ಸ್ವಾಸ್ಥ್ಯಕ್ಕಿಂತ ಬೇರಾವುದೂ ಮುಖ್ಯವಲ್ಲ. ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದು. ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ, ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧ. ಯಾವುದೇ ಧರ್ಮದವರಿರಲಿ, ಈ ದೇಶದ ಕಾನೂನಿಗೆ ತಲೆ ಬಾಗಿಸಬೇಕು. ಇಂತಹ ಅತಿರೇಕದ ಹುಚ್ಚಾಟಗಳನ್ನು ಯಾರೂ ಪ್ರದರ್ಶಿಸಕೂಡದು ಎಂದು ಕಿಡಿ‌ಕಾರಿದ್ದಾರೆ.

ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ 'ಬಲಿ' ಹಾಕಬೇಕು. ಇಡೀ ಜಗತ್ತು ಎದುರಿಸುತ್ತಿರುವ ಕೊರೊನಾ ವೈರಸ್ ವಿರುದ್ಧ ಜನತೆ ಸಂಘರ್ಷ ಮಾಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಧರ್ಮದ ಗುರಾಣಿಯನ್ನು ಅಡ್ಡ ತಂದು ವ್ಯವಸ್ಥೆ ಬುಡಮೇಲು ಮಾಡುವುದನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಪೊಲೀಸರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆಡಳಿತ ವ್ಯವಸ್ಥೆಯ ನೈತಿಕ ಬಲ ಕುಗ್ಗಿಸುವ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿ ದಂಗೆ ಏಳುವವರ ಹೆಡೆಮುರಿ ಕಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details