ಬೆಂಗಳೂರು: ಬಿಜೆಪಿಗೆ ಅಧಿಕಾರದ ದಾಹ ಹೆಚ್ಚಾಗಿದೆ. ಬೇರೆಯವರು ಅಧಿಕಾರದಲ್ಲಿ ಇರುವುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಹಾರಾಷ್ಟ್ರ ರಾಜಕೀಯ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತ ಬಂದ ಸರ್ಕಾರವೂ ಉಳಿಯುವುದು ಡೌಟ್. ಈ ಬಿಜೆಪಿ ಪಕ್ಷ ಪೂರ್ಣ ಬಹುಮತ ಪಡೆದ ಸರ್ಕಾರದ ಅವಧಿ ಮುಗಿಸುವುದಕ್ಕೂ ಬಿಡುವುದಿಲ್ಲ. ಮೇಲ್ನೋಟಕ್ಕೆ ಉದ್ದವ್ ಠಾಕ್ರೆ ಅವರು ಶಾಸಕರ ವಿಶ್ವಾಸ ಗಳಿಸಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಅದರ ಹಿಂದೆ ಇರುವುದು ಬಿಜೆಪಿಯೇ ಎಂದು ಆರೋಪ ಮಾಡಿದರು.
ಕರ್ನಾಟಕದಲ್ಲಿ ನನಗೂ ಇದರ ಅನುಭವವಾಗಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ನನ್ನ ಮೇಲೂ ಆರೋಪ ಮಾಡಿದ್ರು. ನಾನು ಕಾಂಗ್ರೆಸ್ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ 19 ಸಾವಿರ ಕೋಟಿ ಕೊಟ್ಟೆ ಎಂದು ಮೈತ್ರಿ ಸರ್ಕಾರದ ಘಟನೆಯನ್ನು ನೆನಪಿಸಿಕೊಂಡರು. ಮಹಾರಾಷ್ಟ್ರದ ಬಿಜೆಪಿ ನಡವಳಿಕೆ ಸಂವಿಧಾನ ರಚನೆಗೆ ಮಾಡಿದ ಅಪಚಾರ. ಸಂವಿಧಾನ ರಕ್ಷಣೆ ವಿಚಾರ ಇವತ್ತು ಉಳಿದಿಲ್ಲ. ಎಷ್ಟೇ ಒಳ್ಳೆ ರೀತಿಯ ಸರ್ಕಾರ ಮಾಡಿದರೂ ಬೆಲೆ ಇಲ್ಲದಂತೆ ಆಗಿದೆ ಎಂದರು.