ಬೆಂಗಳೂರು:ಸಿನಿಮಾ ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ. ಅಂದರೆ ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ ಅನ್ನುವುದು ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಗಾಂಧಿನಗರ ಕ್ಷೇತ್ರದಲ್ಲಿ ಇಂದು ನಡೆಯುತ್ತಿರುವ ಪಂಚರತ್ನ ರಥಯಾತ್ರೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿನಿಮಾ ಸ್ಟಾರ್ಗಳನ್ನು ಬಿಜೆಪಿಯವರು ಕರೆಸಿ ಪ್ರಚಾರ ಮಾಡಿಸುತ್ತಿದ್ದಾರೆ. ಆದರೆ, ನಮಗೆ ನಮ್ಮ ಕಾರ್ಯಕರ್ತರು, ನನ್ನ ಜನರೇ ಸ್ಟಾರ್ ಪ್ರಚಾರಕರು ಎಂದರು.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದು ಒಳ ಒಪ್ಪಂದದಿಂದ - ಹೆಚ್ಡಿಕೆ.. ನಟ ಸುದೀಪ್ ಯಾವುದೇ ಪಕ್ಷ ಸೇರಲಿ ಅಥವಾ ಪ್ರಚಾರ ಮಾಡಲಿ, ಅದು ಅವರ ವೈಯಕ್ತಿಕ ವಿಷಯ. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗುವುದಿಲ್ಲ. ಸಿನಿಮಾ ನಟರ ಪ್ರಚಾರದಿಂದ ಮತದಾರ ಪ್ರಭಾವಕ್ಕೊಳಗಾಗುವುದಿಲ್ಲ. ನಟರು ಪ್ರಚಾರ ಮಾಡಿದ ಕೆಲವು ಕಡೆ ಸೋಲು ಆಗಿದೆ. ಮಂಡ್ಯದಲ್ಲಿ ಸಿನಿಮಾ ಸ್ಟಾರ್ಗಳಿಂದ ಲೋಕಸಭೆಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಸೋತಿದ್ದಾರೆ ಅನ್ನುತ್ತಾರೆ. ಆದ್ರೆ ಅದು ಸುಳ್ಳು, ನಿಖಿಲ್ ಸೋತಿದ್ದು ಬಿಜೆಪಿ, ಕಾಂಗ್ರೆಸ್, ರೈತ ಸಂಘಟನೆಯ ಒಳ ಒಪ್ಪಂದದಿಂದ ಎಂದು ಹೆಚ್ಡಿಕೆ ಹೇಳಿದರು.
ಇದಕ್ಕೂ ಮುನ್ನ ಬಿನ್ನಿಪೇಟೆ, ಓಕಳಿಪುರಂ ಸರ್ಕಲ್, ಬೆಟ್ಟಮ್ಮ ಸರ್ಕಲ್, ಸನ್ ರೈಸ್ ಸರ್ಕಲ್ ನಲ್ಲಿ ರಥಯಾತ್ರೆ ನಡೆಸಿ ಜನರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತಾವಧಿಯಲ್ಲಿ ಏನೂ ಮಾಡಿಲ್ಲ. ಜನರನ್ನು ಕಷ್ಟಕ್ಕೆ ದೂಡಿರುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು. ಈ ಬಾರಿ ಜೆಡಿಎಸ್ಗೆ ಬೆಂಬಲ ನೀಡಿ ಗಾಂಧಿನಗರ ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.