ಬೆಂಗಳೂರು: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ಐದು ಗ್ಯಾರಂಟಿ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ನುಡಿದಂತೆ ಸಂಪೂರ್ಣವಾಗಿ ನಡೆಸಿಲ್ಲ ಎಂದು ಹೇಳುವುದಿಲ್ಲ, ಪ್ರಯತ್ನ ಪಟ್ಟಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗ್ಯಾರಂಟಿಗಳ ಅನುಷ್ಠಾನಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಕೊಟ್ಟ ಮಾತಿನಂತೆ ನಡೆಯಲು ಪ್ರಯತ್ನಗಳು ನಡೆಯುತ್ತಿವೆ ಅವುಗಳನ್ನು ಮುಂದುವರೆಸಿ ಎಂದರು.
ಗ್ಯಾರಂಟಿಯಿಂದ ಕಾಂಗ್ರೆಸ್‍ಗೆ ಲಾಭವಾಗಿದೆ ಎಂಬುದನ್ನು ವಿಶ್ಲೇಷಿಸುವುದಿಲ್ಲ. ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ. ಆ ನಿಟ್ಟಿನಲ್ಲಿ ಸ್ವಲ್ಪ ಪ್ರಯತ್ನ ಪಟ್ಟಿದ್ದಾರೆ. ಎಲ್ಲ ನಿರುದ್ಯೋಗಿ ಪದವೀಧರರಿಗೂ 3000 ರೂ. ನೀಡುವುದಾಗಿ ಹೇಳಿ ಈಗ ಷರತ್ತು ವಿಧಿಸುತ್ತಿದ್ದಾರೆ. ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿ ಅನುಷ್ಠಾನಕ್ಕೆ ತರುವಾಗ ವಾರ್ಷಿಕ ಸರಾಸರಿ ಆಧರಿಸಿ ಜಾರಿ ಮಾಡಲಾಗುತ್ತಿದೆ. ಸರಾಸರಿ ವಿದ್ಯುತ್ ಬಳಕೆಯ ಜತೆಗೆ ಶೇ.10ರಷ್ಟು ಹೆಚ್ಚುವರಿಯಾಗಿ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಇದನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಗ್ರಾಹಕರು ಇನ್ನೂ ನೋಂದಣಿ ಮಾಡಿಸಿಲ್ಲ:2.14 ಕೋಟಿ ಗ್ರಾಹಕರಿದ್ದಾರೆ. ಇದುವರೆಗೂ ಅಷ್ಟು ಪ್ರಮಾಣದಲ್ಲಿ ಗೃಹಜ್ಯೋತಿಗೆ ನೋಂದಣಿ ಮಾಡಿಲ್ಲ. ಅವರಿಗೆ ತಿಳಿವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಎಲ್ಲ ಗ್ರಾಹಕರನ್ನು ಯೋಜನೆ ವ್ಯಾಪ್ತಿಗೆ ತಂದು ಸೌಲಭ್ಯ ಕಲ್ಪಿಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕು. ದೇಶದಲ್ಲಿ ಬಡತನ ನಿವಾರಣೆಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಲವು ಸರ್ಕಾರಗಳು ಗಮನ ಹರಿಸಿವೆ. ಆಂಧ್ರಪ್ರದೇಶದಲ್ಲಿ ಎರಡು ರೂ.ಗೆ ಕೆಜಿ ಅಕ್ಕಿ ಕೊಡುವುದು ಮೊದಲಿಗೆ ಪ್ರಾರಂಭವಾಯಿತು ಎಂದರು.