ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​​ ನಾಯಕರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ: ಹೆಚ್​ಡಿಕೆ - ನಾಯಕತ್ವ ಬದಲಾವಣೆ

ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಒಂದು ಗುಂಪು ಮುಖ್ಯಮಂತ್ರಿಗಳ ಬಗ್ಗೆ ಅನುಕಂಪದಲ್ಲಿ ಮಾತನಾಡುತ್ತದೆ. ಇನ್ನೊಂದು ಗುಂಪು ಇದು ಭ್ರಷ್ಟ ಸರ್ಕಾರ, ಇಂತಹ ಭ್ರಷ್ಟ ಮುಖ್ಯಮಂತ್ರಿ ಇರಬಾರದು ಎಂದು ಹೇಳುತ್ತದೆ ಎಂದು ಹೆಚ್​ಡಿಕೆ ವ್ಯಂಗ್ಯವಾಡಿದ್ದಾರೆ.

Bangalore
HD Kumaraswamy

By

Published : Jul 20, 2021, 2:48 PM IST

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ವ್ಯಂಗ್ಯವಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾರಕ ಎಂದು ಕಿಡಿಕಾರಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜಿಲ್ಲಾವಾರು ಸಭೆಗೂ ಮುನ್ನ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್​​​ ನಾಯಕರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ: ಹೆಚ್​ಡಿಕೆ ವ್ಯಂಗ್ಯ

ಕಾಂಗ್ರೆಸ್​ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಯಡಿಯೂರಪ್ಪ ಕುರಿತು ಮಾತನಾಡಿ, ವೀರಶೈವ ಸಮುದಾಯಕ್ಕೆ ಅಗೌರವ ತರಬಾರದು. ಯಡಿಯೂರಪ್ಪ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎನ್ನುತ್ತಾರೆ. ಕಾಂಗ್ರೆಸ್​ನ ಮುಂದಿನ ಮುಖ್ಯಮಂತ್ರಿಯಾಗಲು ಟವಲ್ ಹಾಕಿಕೊಂಡವರು ಈ ಸರ್ಕಾರ ಭ್ರಷ್ಟ ಸರ್ಕಾರ. ಇಂತಹ ಭ್ರಷ್ಟ ಮುಖ್ಯಮಂತ್ರಿ ಇರಬಾರದು ಎಂದು ಹೇಳುತ್ತಾರೆ. ಇದರಲ್ಲೇ ಕಾಂಗ್ರೆಸ್ ನಾಯಕರ ದ್ವಿಮುಖ ನೀತಿ ಏನು ಅನ್ನೋದು ಗೊತ್ತಾಗುತ್ತದೆ ಎಂದು ಟೀಕಿಸಿದರು.

ಪ್ರತಿದಿನ ಕೆಲ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳನ್ನು ಭ್ರಷ್ಟ, ಭ್ರಷ್ಟ ಎಂದು ಹೇಳುತ್ತಾರೆ. ಇನ್ನೊಂದು ಕಡೆ ವೀರಶೈವ ಸಮುದಾಯಕ್ಕೆ ಗೌರವ ನೀಡಬೇಕು ಅಂತ ಹೇಳುತ್ತಾರೆ. ಕಾಂಗ್ರೆಸ್ ನಾಯಕರ ಹೇಳಿಕೆ ನೋಡಿದ್ರೆ, ಇವರು ಕಾಂಗ್ರೆಸ್ ನಾಯಕರಾ ಅಥವಾ ಬಿಜೆಪಿ ನಾಯಕರಾ ಅನ್ನುವ ಅನುಮಾನ ಬರುತ್ತದೆ ಎಂದರು.

ಮೈತ್ರಿ ಸರ್ಕಾರ ತೆಗೆದ ದಿನವೇ ನಮ್ಮ ಸರ್ಕಾರ ತೆಗೆದು ಬಂದಿದ್ದೀರಾ. ಗೌರವಯುತವಾಗಿ, ಹೆಸರು ಉಳಿಸಿಕೊಂಡು ಹೋಗಿ ಎಂದು ಉಡಿಯೂರಪ್ಪ ಅವರಿಗೆ ಹೇಳಿದ್ದೆ. ಕಾಂಗ್ರೆಸ್ ನಾಯಕರ ನಡವಳಿಕೆ ನೋಡಿದಾಗ ಇಂತಹ ಪರಿಸ್ಥಿತಿ ಇವರಿಗೆ ಬರಬಾರದಿತ್ತು ಅನ್ಸುತ್ತೆ. ಇವತ್ತು ಅಧಿಕಾರಕ್ಕೋಸ್ಕರ ಒಂದು ಸಮಾಜದ ಓಲೈಕೆಗೆ ಒಂದು ಗುಂಪು ಅನುಕಂಪದ ರೀತಿ ಮಾತನಾಡುವುದು.‌ ಇನ್ನೊಂದು ಗುಂಪು ಭ್ರಷ್ಟಚಾರಿಗಳು ಅಂತ ಹೇಳುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಬಂದ ನಂತರ ಸಿಎಂ ಯಡಿಯೂರಪ್ಪ ನೀರಾವರಿ ಯೋಜನೆ ಕುರಿತು ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದರು. ಆದರೆ, ಕೇಂದ್ರದ ಜಲ ಸಂಪನ್ಮೂಲ ಸಚಿವರು ಹಾಗೂ ತಮಿಳುನಾಡಿನ ಸಚಿವರು ಮೇಕೆದಾಟು ಯೋಜನೆ ಆಗಲ್ಲ. ಪ್ರಧಾನಿಗಳು ಒಪ್ಪಿಗೆ ಕೊಟ್ಟಿಲ್ಲವೆಂದು ಹೇಳ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ರಾಜ್ಯಕ್ಕೆ ಎರಡು ಮಾರಕವಾದ ಪಕ್ಷಗಳೇ ಎಂದರು.

ರಾಜ್ಯಪಾಲರಿಗೆ ಮನವಿ

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಯುಕೆಪಿಯ ಮೂರನೇ ಹಂತದ ಕೆಲಸ ಆಗಬೇಕಿದೆ. ಈಗಾಗಲೇ 75,000 ಕೋಟಿ ಹಣ ಖರ್ಚು ಮಾಡಿದ್ದೇವೆ. ಇನ್ನೂ 6,500 ಕೋಟಿ ಹಣ ಬೇಕು. ಅದು ನೆನಗುದಿಗೆ ಬಿದ್ದಿದೆ. ತಮಿಳುನಾಡಿನಲ್ಲಿ ಹಲವಾರು ನಿರಾವರಿ ಯೋಜನೆಗಳನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಹದಾಯಿ, ಮೇಕೆದಾಟು, ಅಪ್ಪರ್ ಕೃಷ್ಣಾ ಯೋಜನೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಆ ಭಾಗದಲ್ಲಿ ನಮ್ಮ ಪಕ್ಷದ ಆರು ಜನ ಶಾಸಕರಿದ್ದಾರೆ. ಬೆಳಗಾವಿ ಭಾಗದ ಮಾಜಿ ಶಾಸಕರ ಜೊತೆಯಲ್ಲಿ 30 ಜನ ಶಾಸಕರೊಟ್ಟಿಗೆ ರಾಷ್ಟ್ರಪತಿ ಹಾಗೂ ಪ್ರಧಾನಿಗಳಿಗೆ ರಾಜ್ಯಪಾಲರ ಮೂಲಕ ಮನವಿ ನೀಡುತ್ತೇವೆ ಎಂದು ಹೇಳಿದರು.

ಪಕ್ಷ ಬಿಟ್ಟು ಹೋಗಿರುವವರನ್ನು ಮತ್ತೆ ಸೇರಿಸಿಕೊಳ್ಳಲ್ಲ

ಪಕ್ಷ ಬಿಟ್ಟು ಹೋಗಿರುವವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಚರ್ಚೆಯೂ ಆಗಿಲ್ಲ ಎಂದು ಹೆಚ್​ಡಿಕೆ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಅವರೆಲ್ಲ ಬಿಜೆಪಿಗೆ ಹೋಗಿ ಎರಡು ವರ್ಷ ಆಗಿದೆ. ಅಲ್ಲಿ ವಲಸೆ ಹಾಗೂ ಮೂಲ ಅಂತ ಪ್ರಶ್ನೆ ಉಳಿದಿಲ್ಲ. ಅವರೂ ಸದ್ಯಕ್ಕೆ ಅವರ ಪಕ್ಷದ ಶಾಸಕರು, ಸಚಿವರೇ. ನಮ್ಮ ಪಕ್ಷದಿಂದ ವಲಸೆ ಹೋದ ಯಾರನ್ನೂ ವಾಪಸ್ ಕರೆಸುವ ಉದ್ದೇಶ ಇಲ್ಲ. ಕಳೆದ ನಾಲ್ಕು ದಿನದಿಂದ ಚರ್ಚೆ ಮಾಡುತ್ತಿದ್ದೇವೆ. ಇಲ್ಲಿಯೂ ಈ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದು ಹೇಳಿದರು.

ABOUT THE AUTHOR

...view details