ಬೆಂಗಳೂರು: ನಾನು ಹಿಟ್ ಅಂಡ್ ರನ್ ವ್ಯಕ್ತಿಯಲ್ಲ, ಯಾವತ್ತೂ ಕೂಡ ನಾನು ಆ ರೀತಿ ಮಾಡಿದವನಲ್ಲ. ಕಾಂಗ್ರೆಸ್ನವರು ನನ್ನ ಹೆಸರೇಳಿ ಹಿಟ್ ಅಂಡ್ ರನ್ ಅಂತಾರೆ. ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ಪೇ ಸಿಎಂ ಅಂತಾ ಪೋಸ್ಟರ್ ಬೇರೆ ಅಂಟಿಸಿದ್ದರು. ಎಲ್ಲದಕ್ಕೂ ದಾಖಲೆ ಕೊಡ ಅಂತಾ ಹೇಳುತ್ತಿದ್ದರು. ಆದರೆ ಅವರೀಗ ಮಾಡ್ತಿರೋದು ಏನು?. ಅವರ ಯಾವುದೇ ಆರೋಪಗಳಿಗೆ ದಾಖಲೆಗಳಿವೆಯಾ? ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರ ರಚನೆಯಾಗಿ ಎರಡು ತಿಂಗಳಾಯ್ತು. ನಾನು ವಿದೇಶ ಪ್ರವಾಸದಲ್ಲಿದ್ದೆ. ಮಾಧ್ಯಮಗಳ ಸುದ್ದಿಗಳನ್ನು ನಾನು ಗಮನಿಸಿದ್ದೇನೆ. ಜಯಚಂದ್ರ ಅವರಿಗೆ ಬೆದರಿಕೆ ಹಾಕಿದವರು ಯಾರು? ಜಯಚಂದ್ರ ಅವರು ದೆಹಲಿ ಉಸ್ತುವಾರಿ ಕಾರ್ಯದರ್ಶಿ, ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದು ಯಾರು? ಹಲವು ಕರೆಗಳು ಅವರಿಗೆ ಬಂದಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದಿವೆ. ನೈಸ್ ರಸ್ತೆ ವಿಚಾರದಲ್ಲಿ ನೀವೇ ರಿಪೋರ್ಟ್ ಕೊಟ್ಟಿದ್ದೀರಿ. ನಾನು ನಿನ್ನೆ, ಇಂದು ಜಾಹೀರಾತು ಗಮನಿಸಿದ್ದೇನೆ. ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಕೊಟ್ಟಿದ್ದಾರೆ. ಯಾವ ರೀತಿ ನುಡಿದಂತೆ ನಡೆದಿದ್ದೀರ ಹೇಳಿ ಎಂದ ಹೆಚ್ಡಿಕೆ, ಉಚಿತ ವಿದ್ಯುತ್ ಕೊಟ್ಟ ಮೇಲೆ ಬೆಳಕು ಕಂಡ್ರಾ? ಇಲ್ಲಿಯವರೆಗೆ ಜನ ಕರೆಂಟ್ ನೋಡಿರಲಿಲ್ವೇ? ಗೃಹ ಜ್ಯೋತಿ ಸ್ಕೀಂನಲ್ಲಿ ಗೈಡ್ ಲೈನ್ಸ್ ಹಾಕಿದ್ರು. ಗೈಡ್ ಲೈನ್ಸ್ಗೆ ನಮ್ಮದೇನೂ ತಕರಾರಿಲ್ಲ. ಕೆಲವರು 200 ಯೂನಿಟ್ ಮೇಲೆ ಯೂಸ್ ಮಾಡ್ತಿದ್ರು. ಇವರು ನಿಯಮಗಳನ್ನು ಘೋಷಣೆ ಮಾಡಿದ ಮೇಲೆ ವಿದ್ಯುತ್ ಬಳಕೆ ಕಡಿಮೆ ಮಾಡಿದ್ದಾರೆ. ಉಚಿತ ನಮಗೂ ಸಿಗುತ್ತೆ ಅಂತಾ ಕಡಿಮೆ ಮಾಡಿದ್ದಾರೆ. ಈಗ 230 ಯೂನಿಟ್ಗೆ ಬಿಲ್ ಕಳುಹಿಸಿದ್ದಾರೆ. ಯಾವ ಕಾರಣಕ್ಕೆ ನೀವು ಬಿಲ್ ಕಳಿಸಿದ್ರಿ. 50, 60 ಯೂನಿಟ್ ವಿದ್ಯುತ್ ಬಳಸ್ತಿದ್ರು. ಅವರಿಗೆ 10% ಹೆಚ್ಚುವರಿ ಕೊಟ್ರು. ಈಗ ಅವರಿಗೂ 250 ರೂ.ಬಿಲ್ ಕಳುಹಿಸಿದ್ದಾರೆ. ಸದ್ಯ ಕಲಬುರಗಿಗೆ ಹೋಗಿದ್ದಾರೆ. ಉಚಿತ ಬಿಲ್ ಕೊಡೋಕೆ ಅಲ್ಲಿ ಹೋಗಿದ್ದಾರೆ ಎಂದು ತಿಳಿಸಿದರು.