ಕರ್ನಾಟಕ

karnataka

By

Published : May 12, 2020, 4:32 PM IST

ETV Bharat / state

ಲಾಕ್​ಡೌನ್​ ಸಡಿಲಿಕೆ: ಕೇಂದ್ರದ ನೀತಿ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಹೆಚ್​ಡಿಕೆ

ಪ್ರಾರಂಭಿಕ ಹಂತದಲ್ಲಿ ಸರ್ಕಾರ ಲಾಕ್‌ ಡೌನ್ ಬಗ್ಗೆ ತೋರಿಸಿದ ವೇಗ ಹಂತ ಹಂತವಾಗಿ ಕಡಿಮೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

H. D. Kumaraswamy
ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವುದೇ ಪೂರ್ವ ಸಿದ್ದತೆ ಮಾಡಿಕೊಳ್ಳದೇ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿದ್ದ ಕ್ರಮಕ್ಕೆ ಜನ ಸಾಮಾನ್ಯರು ಸ್ಪಂದಿಸಿದ್ದಾರೆ. ಆದರೆ, ಪ್ರಾರಂಭಿಕ ಹಂತದಲ್ಲಿ ಸರ್ಕಾರ ಲಾಕ್‌ ಡೌನ್ ಬಗ್ಗೆ ತೋರಿಸಿದ ವೇಗ ಹಂತ ಹಂತವಾಗಿ ಕಡಿಮೆಯಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

ಸರ್ಕಾರ ನಡೆಸುವವರೇ ಲಾಕ್ ಡೌನ್ ರಿಲ್ಯಾಕ್ಸ್ ಮಾಡಲು ಆರಂಭ ಮಾಡಿದರು. ಅಲ್ಲದೇ, ಲಾಕ್ ಡೌನ್ ಸಡಿಲಿಕೆ ಮಾಡುವಾಗ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಿಲ್ಲ. ಬದಲಾಗಿ ಪ್ರತಿ ದಿನ ಒಂದೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನರಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದರು ಎಂದು ದೂರಿದರು.

ರಾಜ್ಯ ಸರ್ಕಾರ ಘೋಷಿಸಿದ 1,610 ಕೋಟಿ ರೂ. ಮೌಲ್ಯದ ವಿಶೇಷ ಪ್ಯಾಕೇಜ್ ಕುರಿತು ಮಾತನಾಡಿರುವ ಕುಮಾರಸ್ವಾಮಿ ಅವರು, ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡಲಿ. ಆ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿಯಬಾರದು. ಆದರೆ, ಸಿಎಂ ಬಿ.ಎಸ್. ಯಡಿಯೂರಪ್ಪ ಯಾವುದೇ ಪೂರ್ವ ಸಿದ್ಧತೆಗಳಿಲ್ಲದೇ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಹೂ ಮಾರಾಟ ಮಾಡುವವರು, ವಿಶ್ವ ಕರ್ಮ, ರಸ್ತೆ ಕಾರ್ಮಿಕರು ಹೀಗೆ ವಿವಿಧ ವರ್ಗದ 50 ಲಕ್ಷ ಜನ ಇರಬಹುದು. ಈ 50 ಲಕ್ಷ ಕುಟುಂಬಕ್ಕೆ ತಲಾ 5 ಸಾವಿರ ಕೊಟ್ಟರೂ 2.5 ಸಾವಿರ ಕೋಟಿ ಖರ್ಚಾಗುತ್ತದೆ. ಇನ್ನು ಕಟ್ಟಡ ಕಾರ್ಮಿಕರೇ ರಾಜ್ಯದಲ್ಲಿ 21 ಲಕ್ಷ ಜನರಿದ್ದಾರೆ. ಕಾರ್ಮಿಕ ಪರಿಹಾರ ನಿಧಿಯಲ್ಲೇ ಹಣ ಇದೆ. ಆದರೆ, ಈ ಹಣವನ್ನು ಕಾರ್ಮಿಕರ ಅನುಕೂಲಕ್ಕೆ ಬಳಸಲು ರಾಜ್ಯ ಸರ್ಕಾರಕ್ಕೆ ಮನಸ್ಸಿಲ್ಲ ಎಂದು ಕಿಡಿಕಾರಿದರು.

ಮಂಡ್ಯ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ ಮಂಡ್ಯ ಕಾರ್ಖಾನೆಗೆ ಇತಿಹಾಸ ಇದೆ. ಸರ್ಕಾರದ ಪರಿಮಿತಿಯಲ್ಲಿ ಕಾರ್ಖಾನೆ ನಡೆಯಬೇಕು. ಕಾರ್ಖಾನೆ ಆಡಳಿತ ಮಂಡಳಿಯಿಂದ ಕಾರ್ಖಾನೆ ನಷ್ಟವಾಗಿದೆ. ಹೊಸ ಕಾರ್ಖಾನೆ ಮಾಡಲು ನಾನು 450 ಕೋಟಿ ಇಟ್ಟಿದ್ದೆ. ಡಿಸೆಂಬರ್‌ ನಲ್ಲಿ ಕಾರ್ಖಾನೆ ಖಾಸಗಿ ಅವರಿಗೆ ಕೊಡಲು ನಿರ್ಧಾರ ಮಾಡಿದ್ದಾರೆ. ಯಾಕೆ ಈ ನಿರ್ಧಾರ ಅಂತ ಮುಂದಿನ ದಿನಗಳಲ್ಲಿ ಹೇಳುತ್ತೇನೆ‌ ಎಂದರು.

ಮೈಶುಗರ್ ಕಾರ್ಖಾನೆ ಖಾಸಗಿ ಅವರಿಗೆ ನೀಡಲು ವಿರೋಧ ವ್ಯಕ್ತಪಡಿಸಿದ ಅವರು, ಇದು ರೈತರನ್ನು ಮುಳುಗಿಸೋ ಕೆಲಸ. ಉತ್ತರ ಕರ್ನಾಟಕದವರಲ್ಲಿ ಮುಗ್ದ ರೈತರಿಗೆ ಮೋಸ ಮಾಡಿದ ಗಿರಾಕಿಗಳು ಬಂದು ಇಲ್ಲಿಗೆ ಸೇರಿಕೊಂಡ್ರೆ ಉತ್ತರ ಕರ್ನಾಟಕದಲ್ಲಿ ನಡೆಯೋ ರೀತಿ ಮಂಡ್ಯದಲ್ಲಿ ನಡೆಯುತ್ತದೆ. ಈ ವರ್ಷ ಟೆಂಡರ್ ಕೊಟ್ಟರೂ ಈ ವರ್ಷ ಕೆಲಸ ಆರಂಭ ಆಗುವುದಿಲ್ಲ. ಜೂನ್, ಜುಲೈಗೆ ಕಬ್ಬು ಅರೆಯಬೇಕು. ಕೂಡಲೇ ಸರ್ಕಾರ ಇದಕ್ಕೆ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

ಅಲ್ಲದೇ ಬಳ್ಳಾರಿಯಲ್ಲಿ ಭೀಮಕ್ಕ ಎಂಬ ಆಶಾ ಕಾರ್ಯಕರ್ತೆ ಮೊನ್ನೆ ಕೆಲಸ ಮಾಡೋವಾಗ ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ ಸರ್ಕಾರ ಕೇವಲ 2 ಲಕ್ಷ ಕೊಟ್ಟಿದೆ. ಪ್ರಧಾನಿ ಮೋದಿ ವಾರಿಯರ್ಸ್​ಗೆ 50 ಲಕ್ಷ ಕೊಡಬೇಕು ಅಂತ ಹೇಳಿದ್ದಾರೆ. ಕೂಡಲೇ ಸರ್ಕಾರ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details