ಬೆಂಗಳೂರು: "ಐಟಿ-ಬಿಟಿ ಮೂಲಕ ಜಗದ್ವಿಖ್ಯಾತಿಯಾಗಿರುವ ಬೆಂಗಳೂರು ಮಹಾನಗರವನ್ನು ಬಿಜೆಪಿ ಸರ್ಕಾರ ಕೊಳ್ಳೆ ಹೊಡೆಯುವ ಎಟಿಎಂ ಮಾಡಿಕೊಂಡಿದೆ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದರು. ಹೆಬ್ಬಾಳ ಕ್ಷೇತ್ರದಲ್ಲಿ ನಿನ್ನೆ(ಮಂಗಳವಾರ) ರಾತ್ರಿ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ, "ಸರ್ಕಾರ ಕಸ ವಿಲೇವಾರಿಯಲ್ಲಿ ಅಕ್ರಮ, ರಸ್ತೆ ಗುಂಡಿ ಮುಚ್ಚುವುದರಲ್ಲಿ ಅಕ್ರಮ ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಅಕ್ರಮ ಎಸಗುತ್ತಿದೆ. ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದೆ" ಎಂದು ದೂರಿದರು.
"ಬೆಂಗಳೂರು ನಗರ ನೋಡಿದರೆ ಈಗ ಎರಡು ರಾಷ್ಟ್ರೀಯ ಪಕ್ಷಗಳಿಗೆ ದುಡ್ಡು ಮಾಡುವ ಎಟಿಎಂ ಆಗಿದೆ. ಇವರಿಗೆಲ್ಲ ಇಲ್ಲಿ ಒಳ್ಳೆಯ ಆದಾಯ ಬರ್ತಿದೆ. ಜನರನ್ನು ಲೂಟಿ ಮಾಡುತ್ತಿದ್ದಾರೆ. ವಿಧಾನಸೌಧ ಇವರ ಕೈಯಲ್ಲಿ ಇದೆ. ಬಿಬಿಎಂಪಿ ಕೂಡ ಇವರ ಕೈಯಲ್ಲೇ ಇದೆ. ಹೀಗಾಗಿ ಲೂಟಿ ಮಾಡಲು ಪೊಗದಸ್ತಾದ ಎಟಿಎಂ ಇವರಿಗೆ ಸಿಕ್ಕಿದೆ. ಪಂಚರತ್ನ ಯಾತ್ರೆ ಮಾಡುತ್ತಾ ಹೆಬ್ಬಾಳ ಕ್ಷೇತ್ರದಲ್ಲಿ ನೋಡಿಕೊಂಡು ಬಂದೆ. ರಸ್ತೆಯಲ್ಲೇ ರಾಶಿ ರಾಶಿ ಕಸ ಬಿದ್ದಿದೆ. ಬಿಬಿಎಂಪಿ ಏನು ಮಾಡುತ್ತಿದೆ ಎನ್ನುವುದು ಇದರಿಂದ ಅರ್ಥವಾಗುತ್ತದೆ" ಎಂದು ಕಿಡಿಕಾರಿದರು.
ಪ್ರತಿಮೆ ರಾಜಕಾರಣಕ್ಕೆ ಆಕ್ರೋಶ: "ಬಿಜೆಪಿ ಸರ್ಕಾರ ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಕೆಲವು ವಿಚಾರಗಳು ತಿರುಗುಬಾಣವಾದ ಮೇಲೆ ಪುತ್ಥಳಿ ಅನಾವರಣದಲ್ಲಿ ರಾಜಕಾರಣ ಮಾಡುತ್ತಿದೆ. ಮಾಡಲಿ ಸಂತೋಷ. ಈಗ ಉರಿಗೌಡ ಮತ್ತು ನಂಜೇಗೌಡ ಅಂತಾ ಹೇಳುತ್ತಿದ್ದಾರೆ. ಹೀಗೆ ಮಾಡಿದರೆ ಜನ ಏನು ಮಾಡುತ್ತಾರೆ ಎನ್ನುವುದು ಗೊತ್ತಿದೆ. ಈ ಬಾರಿ ಬಿಜೆಪಿ ಸೋಲುವುದು ಖಚಿತ" ಎಂದು ಭವಿಷ್ಯ ನುಡಿದರು.