ಕರ್ನಾಟಕ

karnataka

ETV Bharat / state

ಡ್ರಗ್ಸ್ ಜಾಲ ಪ್ರಕರಣ ಸಂಬಂಧ ಅನುಶ್ರೀ ರಕ್ಷಣೆಯಲ್ಲಿ ಮಾಜಿ ಸಿಎಂ ಕೈವಾಡ ಆರೋಪ: ಗರಂ ಆದ ಹೆಚ್​ಡಿಕೆ - ಅನುಶ್ರೀ ಡ್ರಗ್ಸ್​

ಡ್ರಗ್ಸ್​ ನಂಟು ಆರೋಪ ಸಂಬಂಧ ಆ್ಯಂಕರ್​ ಅನುಶ್ರೀ ರಕ್ಷಣೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕೈವಾಡ ಇದೆ ಎಂದು ವರದಿ ಬಿತ್ತರಿಸಲಾಗಿದೆ. ಹಾಗಾದರೆ ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ತನಿಖೆ ನಡೆಸಿ ಸರ್ಕಾರ ಬಹಿರಂಗ ಪಡಿಸಬೇಕು ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

HD Kumaraswamy
ಹೆಚ್​ಡಿಕೆ

By

Published : Oct 3, 2020, 7:24 PM IST

ಬೆಂಗಳೂರು:ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಅನುಶ್ರೀ ರಕ್ಷಣೆ ಮಾಡುವಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕೈವಾಡ ಇದೆ ಎಂಬ ವರದಿಯನ್ನು ಮಾಧ್ಯಮಗಳು ಬಿತ್ತರಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್​ಡಿಕೆ, ಮಾಜಿ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ಪತ್ರ ಬರೆದು ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

ಖನಿಜ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡ್ರಗ್ಸ್ ಜಾಲದ ಬಗ್ಗೆ ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಡ್ರಗ್ಸ್ ಜಾಲದ ಪ್ರಕರಣ ಸಂಬಂಧ ನಿರೂಪಕಿ ಅನುಶ್ರೀಗೆ ನೋಟಿಸ್ ನೀಡಿದ ವೇಳೆ ಮೂರು ರಾಜಕೀಯ ಪಕ್ಷಗಳ ನಾಯಕರಿಂದ ಒತ್ತಡ ತರಲು ಆಕೆ ಪ್ರಯತ್ನಿಸಿದ್ದಳು. ಈ ಬಗ್ಗೆ ಆಕೆಯ ಮೊಬೈಲ್ ಕಾಲ್ ಲಿಸ್ಟ್‌ನಲ್ಲಿ ಮಾಹಿತಿ ಲಭ್ಯವಾಗಿರುವ ಬಗ್ಗೆ ಸಿಸಿಬಿ ಅಧಿಕಾರಿಗಳೇ ವಿಷಯ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಕೆಯ ರಕ್ಷಣೆಗೆ ಮಾಜಿ ಮುಖ್ಯಮಂತ್ರಿಯೊಬ್ಬರ ಕೈವಾಡ ಇದೆ ಎಂದು ವರದಿ ಬಿತ್ತರಿಸಲಾಗಿದೆ. ಹಾಗಾದರೆ ಆ ಮಾಜಿ ಮುಖ್ಯಮಂತ್ರಿ ಯಾರು? ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ತನಿಖೆ ನಡೆಸಿ ಸರ್ಕಾರವಾದರೂ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಮಾಧ್ಯಮಗಳ ವರದಿ ಸತ್ಯವೋ? ಅಥವಾ ಕಪೋಲಕಲ್ಪಿತವೋ ಎಂಬುದು ಗೊತ್ತಾಗಬೇಕು. ಒಂದು ವೇಳೆ ಕಪೋಲಕಲ್ಪತ ವರದಿಗಳನ್ನು ಸುಮ್ಮನೆ ಬಿಡಬಾರದು. ರಾಜ್ಯದಲ್ಲಿ ಆರು ಮಂದಿ ಮಾಜಿ ಮುಖ್ಯಮಂತ್ರಿಗಳಿದ್ದಾರೆ. ನಾನು ಸೇರಿದಂತೆ ಸಿದ್ದರಾಮಯ್ಯ, ವೀರಪ್ಪಮೊಯಿಲಿ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ, ಎಸ್.ಎಂ.ಕೃಷ್ಣ ರಾಜ್ಯದಲ್ಲಿರುವ ಮಾಜಿ ಮುಖ್ಯಮಂತ್ರಿಗಳು. ಆರು ಮಂದಿ ಪೈಕಿ ಒಬ್ಬರ ಕೈವಾಡ ಇರಬೇಕಲ್ಲವೇ? ಯಾರೋ ಒಬ್ಬರ ತೇಜೋವಧೆ ಮಾಡಲು ಮಾಧ್ಯಮಗಳು ಮುಂದಾದರೆ ಸುಮ್ಮನಿರಲು ಸಾಧ್ಯವಿಲ್ಲ. ಪ್ರತಿ ದಿನ ಒಂದೊಂದು ಹೆಸರು ಹೊರ ಬರುತ್ತಿದೆ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಧ್ಯಮಗಳೇ ಮಾಡುತ್ತಿವೆಯೇ? ಅಥವಾ ಸರ್ಕಾರ ಮಾಡುತ್ತಿದೆಯೇ? ಎಂಬುದು ಗೊತ್ತಾಗಬೇಕು. ಒಂದು ವೇಳೆ ಮಾಧ್ಯಮಗಳೇ ಸೃಷ್ಟಿ ಮಾಡಿದ್ದರೆ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯಾವ ಆಧಾರದ ಮೇಲೆ ಮಾಜಿ ಮುಖ್ಯಮಂತ್ರಿಗಳು ಎಂಬುದು ಪ್ರಸ್ತಾಪವಾಗಿದೆ ಎಂಬುದು ಗೊತ್ತಾಗಬೇಕು. ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡ ಬಳಿಕ ಇದರ ಹಿನ್ನೆಲೆಯನ್ನು ಪರಿಶೀಲನೆ ನಡೆಸಿದ್ದೇನೆ. ಈ ವೇಳೆ ಮಂಗಳೂರಿನ ವರದಿಗಾರರೊಬ್ಬರು ಪೊಲೀಸ್ ಅಧಿಕಾರಿ ನೀಡಿರುವ ಮಾಹಿತಿ ಎಂದು ತಿಳಿಸಿದ್ದಾರೆ ಎಂಬುದು ಗೊತ್ತಾಗಿದೆ. ತನಿಖಾಧಿಕಾರಿ ಶಿವಪ್ರಕಾಶ್ ಎಂಬಾತ ವಿಷಯ ತಿಳಿಸಿದ್ದಾರೆ. ತನಿಖೆ ವೇಳೆ ಯಾವುದೇ ಅಂಶ ಸೋರಿಕೆಯಾಗಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಈ ರೀತಿ ಸೋರಿಕೆಯಾದರೆ ರಾಜ್ಯದ ಜನತೆ ಮಾಜಿ ಮುಖ್ಯಮಂತ್ರಿಗಳ ಮೇಲೆ ಸಂಶಯ ಪಡಲಿದ್ದಾರೆ. ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೂ ಇದು ಇರಿಸು-ಮುರಿಸು. ಹೀಗಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವ ಮಾಜಿ ಮುಖ್ಯಮಂತ್ರಿ ಯಾರು ಎಂಬುದು ಸಾರ್ವಜನಿಕವಾಗಿ ಗೊತ್ತಾಗಲಿ ಎಂದು ಹೇಳಿದರು.

ಮಾಧ್ಯಮಗಳಿಗೂ ಜವಾಬ್ದಾರಿ...

ಸಮಾಜದ ಹಿತ ಕಾಯುವಲ್ಲಿ ರಾಜಕಾರಣಿಗಳ ಜವಾಬ್ದಾರಿ ಎಷ್ಟು ಇದೆಯೋ? ಅಷ್ಟೇ ಹೊಣೆಗಾರಿಕೆ ಮಾಧ್ಯಮಗಳಿಗೂ ಇದೆ. ನಮಗಿರುವುದಕ್ಕಿಂತ ಎರಡು ಪಟ್ಟು ಉತ್ತರದಾಯಿತ್ವ ಮಾಧ್ಯಮಗಳಿಗೆ ಇದೆ. ಸಾರ್ವಜನಿಕವಾಗಿ ವಿಚಾರ ಪ್ರಸ್ತಾಪಿಸಿ ಸಂಶಯ ಮೂಡಿಸುವುದು ಸರಿಯಲ್ಲ. ನಾನು ಅದನ್ನು ಸುಮ್ಮನೆ ಬಿಡುವುದಿಲ್ಲ. ವರದಿಗಾರ ಸುಳ್ಳು ಹೇಳಿದ್ದರೆ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆಗೂ ಮಾತನಾಡಿದ್ದೇನೆ. ಒಂದು ವೇಳೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದರೆ ತನಿಖೆ ಹಂತದಲ್ಲಿ ಅಂತಹ ಕೆಲಸ ಮಾಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ABOUT THE AUTHOR

...view details