ಬೆಂಗಳೂರು: ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಸಿಡಿಯಲ್ಲಿ ಅವರು ಎಕ್ಸ್‌ಪರ್ಟ್ಸ್ ಇದ್ದಾರೆ. ಅದನ್ನ ತೋರಿಸಿಕೊಂಡು ಓಡಾಡಿ. ಮುನಿರತ್ನ ಇದ್ದಾರಲ್ಲ, ಅವರಿಗೆ ಹೇಳಿ ಒಂದು ಸ್ಕ್ರೀನ್ ರೆಡಿ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಟೀಕಿಸುತ್ತ ಜೋಶಿಯವರ ಬ್ರಾಹ್ಮತ್ವದ ವಿರುದ್ಧ ಹೇಳಿಕೆಯನ್ನು ಹೆಚ್ ಡಿಕೆ ನೀಡಿದ್ದರು. ಇದನ್ನು ಖಂಡಿಸಿದ್ದ ಬಿಜೆಪಿ ವಕ್ತಾರ ಎನ್.ರವಿಕುಮಾರ್, 'ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಅಲ್ಲ. ಅವರ ಬಗ್ಗೆ ಸಿಡಿ, ತಾಜ್ ವೆಸ್ಟೆಂಡ್ ಹೋಟೆಲ್, ಅವರ ಮನೆ, ಅವರ ತೋಟದ ಮನೆ ಇವೆಲ್ಲ ಪ್ರಕರಣಗಳು ನನಗೆ ಗೊತ್ತಿವೆ. ಅವರು ಇದೇ ರೀತಿ ಮಾತನಾಡುತ್ತಿದ್ದರೆ ನಾವು ಕೂಡ ರಾಜಕಾರಣ ಮಾಡಲು ಬಂದವರು ಎಂಬುದನ್ನು ತಿಳಿದುಕೊಳ್ಳಲಿ' ಎಂದು ಸವಾಲೆಸೆದಿದ್ದರು.
ಇದನ್ನೂ ಓದಿ:ಹೆಚ್ಡಿಕೆ ಸತ್ಯ ಹರಿಶ್ಚಂದ್ರ ಅಲ್ಲ,ಇದೇ ರೀತಿ ಮಾತನಾಡಿದರೆ ವೆಸ್ಟ್ ಎಂಡ್ ಬಗ್ಗೆ ಮಾತನಾಡಬೇಕಾಗುತ್ತೆ: ರವಿಕುಮಾರ್
ಬಿಜೆಪಿ, ಕಾಂಗ್ರೆಸ್ ನಾಯಕರಿಂದ ಖಂಡನೆ:ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ದಾಸರಹಳ್ಳಿ ಪಂಚರತ್ನ ಯಾತ್ರೆ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬ್ರಾಹ್ಮಣ ವಿರುದ್ಧದ ಹೇಳಿಕೆಗೆ ಬಿಜೆಪಿ ನಾಯಕರು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಹೆಚ್ಡಿಕೆ ಹೇಳಿಕೆಯನ್ನು ಖಂಡಿಸಿದ್ದರು.
ಹೆಚ್ಡಿಕೆ ಹೇಳಿದ್ದೇನು?:ಕುಮಾರಸ್ವಾಮಿ ದಾಸರಹಳ್ಳಿ ಕ್ಷೇತ್ರದಲ್ಲಿನ ಪಂಚರತ್ನ ಯಾತ್ರೆ ವೇಳೆ ಮಾತನಾಡುತ್ತ, 'ಪ್ರಹ್ಲಾದ್ ಜೋಶಿಯವರನ್ನು ಮುಂದಿನ ಸಿಎಂ ಮಾಡಲು ಆರ್ಎಸ್ಎಸ್ ನಿರ್ಧಾರ ಮಾಡಿದೆ. ಜೋಶಿಯವರನ್ನ ಸಿಎಂ ಮಾಡಿ, 8 ಮಂದಿ ಉಪ ಮುಖ್ಯಮಂತ್ರಿ ಮಾಡುವ ಪ್ಲಾನ್ ಆರ್ಎಸ್ಎಸ್ ದೆಹಲಿ ಕಚೇರಿಯಲ್ಲಿ ಚರ್ಚೆ ನಡೆದಿದೆ. ಹೀಗಾಗಿ ನಿನ್ನೆಯಿಂದ ನಮ್ಮ ಮೇಲೆ ಗಧಾ ಪ್ರಹಾರ ಶುರು ಮಾಡಿದ್ದಾರೆ. ಅವರು ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ. ನಮ್ಮ ಭಾಗದ ಹಳೆ ಮೈಸೂರು ಭಾಗದ ಬ್ರಾಹ್ಮಣ ವರ್ಗಕ್ಕೆ ಸೇರಿದವರಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಜೆಡಿಎಸ್ ಪಂಚರತ್ನ ಯಾತ್ರೆಯಲ್ಲ, ಕುಟುಂಬದ ನವಗ್ರಹ ಯಾತ್ರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ನಮ್ಮ ಹಳೆ ಮೈಸೂರು ಭಾಗದ ಬ್ರಾಹ್ಮಣರು 'ಸರ್ವೇ ಜನಾಃ ಸುಖಿನೋ ಭವಂತು' ಎನ್ನುವವರು. ಆದರೆ ಜೋಶಿಯವರು ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ. ಅವರಿಗೆ ದೇಶ ಒಡೆಯುವಂತದ್ದು, ಕುತಂತ್ರ ರಾಜಕಾರಣ ಮಾಡುವಂತದ್ದು, ದೇಶಭಕ್ತಿಯ ಹೆಸರಲ್ಲಿ ದೇಶಕ್ಕೆ ಕೊಡುಗೆ ಕೊಟ್ಟಂತವರನ್ನು ಮಾರಣಹೋಮ ಮಾಡುವಂತದ್ದು ಈ ವರ್ಗದವರಿಂದ ಬಂದವರ ಕೃತ್ಯ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.