ಅಮಿತ್ ಶಾ ವಿರುದ್ಧ ಹೆಚ್ಡಿಕೆ ವಾಗ್ದಾಳಿ ಬೆಂಗಳೂರು: ನಮಗೆ ಹಣ ಬಲ ಇಲ್ಲ, ಜನ ಬಲ ಮಾತ್ರ ಇದೆ. ಈ ಬಾರಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪದ್ಮನಾಭ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚರತ್ನ ಕಾರ್ಯಕ್ರಮ ಅತ್ಯುತ್ತಮ ಅಂಶವನ್ನು ಜನರ ಮುಂದಿಟ್ಟಿದೆ. ಇದರೊಂದಿಗೆ ಗ್ರಾಮ ವಾಸ್ತವ್ಯ, ಸುವರ್ಣ ಗ್ರಾಮ ಯೋಜನೆಗಳೆಲ್ಲವು ಇದೆ ಎಂದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎರಡು ಬಾರಿಯೂ ಮಾತು ಉಳಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರನ್ನ ಈ ಬಾರಿ ಜನ ಬೆಂಬಲಿಸುತ್ತಾರೆ. ಯಾರೇ ಏನೇ ಮಾತಾಡಿದ್ರೂ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದರು.
ಜೆಡಿಎಸ್, ಕಾಂಗ್ರೆಸ್ ಬಿ ಟೀಮ್ ಎಂಬ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೌಡರು, ಹೇಳಿಕೊಳ್ಳುವ ಅಧಿಕಾರ ಇದೆ, ನಾನು ಅದನ್ನು ಹೇಗೆ ಖಂಡಿಸಲಿ. ಎಲ್ಲದಕ್ಕೂ ಮಾತನಾಡುವುದಕ್ಕೆ ಹೋಗಲ್ಲ. ಚುನಾವಣೆ ವೇಳೆ ಫಲಿತಾಂಶ ಕೊಡೋರು ರಾಜ್ಯದ ಜನ ಎಂದರು. ಮೇ 8 ರವರೆಗೆ ಒಂದು ದಿನಕ್ಕೆ ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲು ತೀರ್ಮಾನ ಮಾಡಿದ್ದೇನೆ. ಕುಮಾರಸ್ವಾಮಿ ನಿನ್ನೆ ಡಿಶ್ಚಾರ್ಜ್ ಆಗಿದ್ದು ಪ್ರಚಾರ ಮಾಡ್ತಿದ್ದಾರೆ. 40-50 ಕಡೆ ಅವರು ಪ್ರಚಾರ ಮಾಡ್ತಾರೆ. ನಾನು ಹಲವು ಕಡೆ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಅಮಿತ್ ಶಾ ವಿರುದ್ಧ ಹೆಚ್ಡಿಕೆ ಕಿಡಿ, ಮೈಸೂರು: ಅಮಿತ್ ಶಾ ಕರ್ನಾಟಕಕ್ಕೆ ಬಂದು ರೋಡ್ ಶೋ ಮಾಡಿದ ಕೂಡಲೇ ಎಲ್ಲವೂ ಮತವಾಗಿ ಪರಿವರ್ತನೆ ಆಗುವುದಿಲ್ಲ. ಅಮಿತ್ ಶಾ ಕರ್ನಾಟಕಕ್ಕೆ ಬಂದ ತಕ್ಷಣ ಕಮಾಲ್ ಏನು ನಡೆಯುವುದಿಲ್ಲ, ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ.ಕುಮಾರಸ್ವಾಮಿ ಹೇಳಿದರು.
ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಎಚ್ ಡಿ.ಕುಮಾರಸ್ವಾಮಿ, ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಿನಿಂದ ನಿರಂತರ ಪ್ರಚಾರದಿಂದ ಸ್ವಲ್ಪ ಜ್ವರ ಹಾಗೂ ಮೈ ಕೈ ನೋವು ಇತ್ತು, ರೆಸ್ಟ್ ತೆಗೆದುಕೊಂಡೆ. ಈಗ ಸ್ವಲ್ಪ ಆರೋಗ್ಯ ಪರವಾಗಿಲ್ಲ. ಚುನಾವಣೆ ಇರುವ ಕಾರಣ ಹೆಚ್ಚಿಗೆ ರೇಸ್ಟ್ ಸಾಧ್ಯವಾಗಿಲ್ಲ ಎಂದರು.
ಅಮಿತ್ ಶಾ ಅವರ ಕಮಾಲ್ ನಡೆಯುವುದಿಲ್ಲ:ಕರ್ನಾಟಕಕ್ಕೆ ಅಮಿತ್ ಶಾ ಬಂದ ತಕ್ಷಣ ಯಾವುದೇ ಕಮಾಲ್ ಮಾಡಲು ಆಗುವುದಿಲ್ಲ. ಅಮಿತ್ ಶಾ ರ‍್ಯಾಲಿಗೆ ಬಂದವರೆಲ್ಲ ಓಟಾಗಿ ಪರಿವರ್ತನೆ ಆಗುವುದಿಲ್ಲ. ಅವರು ಬರುರ್ತಾರೆ ಹೋಗ್ತಾರೆ. ಇವರಿಂದ ಕರ್ನಾಟಕಕ್ಕೆ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು. ಇವರಿಗೆ ಕರ್ನಾಟಕದ ಅಭಿವೃದ್ಧಿ ಬೇಕಿಲ್ಲ, ಧರ್ಮದ ವಿಚಾರ ಇಟ್ಟುಕೊಂಡು ಮಾತನಾಡುತ್ತಾರೆ. ಅಭಿವೃದ್ಧಿ ವಿಚಾರ ಅವರ ಬಳಿ ಇಲ್ಲ ಎಂದು ಟೀಕಿಸಿದರು. ನಾವು ಜನರ ಬಳಿ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮತ ಕೇಳುತ್ತೇವೆ ಎಂದು ಹೇಳಿದರು.
ವರುಣಾದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕು:ವರುಣಾದಲ್ಲಿ ನಾವು ಯಾರ ಜೊತೆಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅಲ್ಲಿ ನಮ್ಮ ಅಭ್ಯರ್ಥಿ ಡಾ.ಭಾರತಿ ಶಂಕರ್ ಗೆಲ್ಲಬೇಕು ಎಂಬುದೆ ನಮ್ಮ ಉದ್ದೇಶ. ಇಲ್ಲಿ ಯಾರನ್ನು ಸೋಲಿಸಬೇಕೆಂಬುದು ನಮ್ಮ ಉದ್ದೇಶ ಅಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯವನ್ನು ಲೂಟಿ ಮಾಡಿವೆ, ಆದ್ದರಿಂದ ನಾವು ಯಾವ ಪಕ್ಷದ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ, ಮಾಡಿಕೊಳ್ಳುವುದೂ ಇಲ್ಲ. ಅಭಿವೃದ್ಧಿ ಮಾಡದ ಎರಡು ಪಕ್ಷಗಳನ್ನು ಸೋಲಿಸುವುದೇ ನಮ್ಮ ಗುರಿ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ:ಲಿಂಗಾಯತರು ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಭ್ರಷ್ಟಾಚಾರ ಒಂದು ಸಮಾಜಕ್ಕೆ ಇಂದು ಸೀಮಿತವಾಗಿಲ್ಲ. ವ್ಯವಸ್ಥೆ ಇರುವುದೇ ಹಾಗೇ, ಆದರೆ, ಸಿದ್ದರಾಮಯ್ಯ ಈ ಬಗ್ಗೆ ಯಾಕೆ ಈ ರೀತಿ ಹೇಳಿದರೋ ಗೊತ್ತಿಲ್ಲ. ಬಹುಶಃ ಕಾಂಗ್ರೆಸ್ ಮುಗಿಸಲು ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಭೋಜೇಗೌಡನಿಗೆ ನೋಟಿಸ್:ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ, ನೋಟಿಸ್ ನೀಡಲು ಹೇಳಿದ್ದೇನೆ. ಜೊತೆಗೆ ದೂರವಾಣಿಯಲ್ಲಿಯೂ ಸಹ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಮ್ಮ ಗುರಿ ಸ್ಪಷ್ಟ ಬಹುಮತದೊಂದಿಗೆ ಯಾರ ಹಂಗಿಲ್ಲದೇ ಸರ್ಕಾರ ರಚನೆ ಮಾಡುವುದು. ಈ ಬಾರಿ ಬೆಂಗಳೂರು, ಬೆಳಗಾವಿ ಸೇರಿದಂತೆ ಎಲ್ಲ ಕಡೆ ಜೆಡಿಎಸ್ ಹೆಚ್ಚಿನ ಸ್ಥಾನ ಗಳಿಸಲಿದೆ. ಅದೇ ರೀತಿ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಜಿ ಟಿ.ದೇವೇಗೌಡ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೆಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪ್ರಚಾರಕ್ಕೆ ಪ್ರಧಾನಿಯನ್ನಾದರೂ ಕರೆಸಿಕೊಳ್ಳಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಿಕೊಳ್ಳಲಿ: ಆತಂಕ ಇಲ್ಲ ಎಂದ ಹೆಚ್ಡಿಕೆ