ಬೆಂಗಳೂರು:ಯಾರು ಪಕ್ಷ ಬಿಟ್ಟು ಹೋಗುತ್ತಿದ್ದಾರೋ ಅವರೆಲ್ಲ ಪಕ್ಷದಲ್ಲಿ ಅಭಿವೃದ್ಧಿ ಪಡೆದು, ಬೇರೆ ಬಸ್ ಹತ್ತುತ್ತಿರುವವರು. ಯಾರ್ಯಾರು ಹೋಗುತ್ತಾರೆ ಎಂಬುದು ಎರಡು ವರ್ಷದ ಹಿಂದೆಯೇ ಗೊತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮಗೆ ಇದು ಹೊಸ ವಿಚಾರ. ಗುಬ್ಬಿ ಶಾಸಕ ಶ್ರೀನಿವಾಸ್ ಸಭೆ ಮಾಡಿ ಪಕ್ಷ ಬಿಟ್ಟು ಹೋಗ್ತೀವಿ ಅಂತ ಹೇಳಿದ್ದಾರೆ.ಇನ್ನು ಗುಬ್ಬಿಯಲ್ಲಿ ನಡೆದ ಸಭೆಯಲ್ಲಿ ಎಲ್ಲವನ್ನೂ ಜನತೆ ಮುಂದಿಟ್ಟಿದ್ದೇನೆ. ಜನತೆ ಅದರ ತೀರ್ಮಾನ ಮಾಡಲಿದ್ದಾರೆ. ಕಳೆದೆರಡುವರ್ಷಗಳಿಂದ ಕೆಲವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ನೋಡಿದರೆ, ಮಾನಸಿಕವಾಗಿ ಹೋಗಿದ್ರು, ಈಗ ದೈಹಿಕವಾಗಿ ಹೋಗ್ತಿದ್ದಾರೆ. ಹೋಗುವವರು ಸಂತೋಷವಾಗಿ ಹೋಗಲಿ ಎಂದರು.
ಎರಡು ಮೂರು ಹೆಸರುಗಳನ್ನು ಹೊರತುಪಡಿಸಿ ಈಗಾಗಲೇ ಯಾರ್ಯಾರು ಅಭ್ಯರ್ಥಿಗಳು ಅಂತ ನಿರ್ಧಾರ ಮಾಡಿದ್ದೇವೆ. ಯಾವ ಕ್ಷೇತ್ರ ನಮಗೆ ಅತ್ಯಂತ ಸುರಕ್ಷಿತ ಎಂದು ಸರ್ವೆ ಮಾಡಿದ್ದೇವೆ. ತಂತ್ರಗಾರಿಕೆಗಿಂತ ಪಕ್ಷ ಸಂಘಟನೆ ಮುಖ್ಯ. ಕಳೆದ ಹಲವು ವರ್ಷಗಳಿಂದ ಯಾವ ಕ್ಷೇತ್ರವನ್ನು ಬಿಗಿ ಮಾಡಿಕೊಳ್ಳಬೇಕು ಮಾಡುತ್ತಿದ್ದೇವೆ ಎಂದರು.
ರಾಮನಗರ ರಾಜಕೀಯ ಜನ್ಮ ಕೊಟ್ಟ ಸ್ಥಳ:
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರುವ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ನನ್ನನ್ನು ಸೆಣೆಸಲು ರಾಜ್ಯದ ಯಾವ ಯಾವ ಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷರು ಯಾರ ಜೊತೆ ಕೈಜೋಡಿಸುತ್ತಿದ್ದಾರೆ ಎಂಬುದು ಗೊತ್ತಿದೆ. ರಾಮನಗರ ನಮಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಜಿಲ್ಲೆ. ಕನಕಪುರದಲ್ಲಿ ನಮ್ಮ ಪಕ್ಷದ ಯಾವ ಅಭ್ಯರ್ಥಿಯನ್ನು ಹಾಕಿದರೂ ಗಣನೀಯ ಮತಗಳನ್ನು ಪಡೆಯಲಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿಯಲ್ಲಿ ನನ್ನನ್ನು ಬೆಳೆಸಿದಂತಹ ಜನರಿದ್ದಾರೆ. ರಾಮನಗರ ನನಗೆ ರಾಜಕೀಯ ಜನ್ಮ ಕೊಟ್ಟ ಸ್ಥಳ. ಪಕ್ಷ ಉಳಿಸಲು ಕಾರ್ಯಕರ್ತರ ಭಾವನೆ ಉಳಿಸಲು ನಮ್ಮ ಕುಟುಂಬದ ತಲೆ ಕೊಟ್ಟಿದ್ದೇವೆ. ಇದು ನಮ್ಮ ಪಕ್ಷದ ಸ್ಥಾನ. ಚನ್ನಪಟ್ಟಣದಲ್ಲಿ 20 ವರ್ಷ ಪಕ್ಷ ಗೆಲ್ಲಲು ಆಗಿರಲಿಲ್ಲ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎರಡು ಕಡೆ ನಿಂತೆ. ನಂತರ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದೆ ಎಂದು ಹೇಳಿದರು.
ಬಿಟ್ ಕಾಯಿನ್ ಬಗ್ಗೆ 2018 ರಲ್ಲೇ ಹೇಳಿದ್ದೆ :
ಬಿಟ್ ಕಾಯಿನ್ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, 2018 ರಲ್ಲಿ ಯುಬಿಸಿಟಿಯಲ್ಲಿ ಘಟನೆ ನಡೆಯಿತು. ಅಂದೇ ನಾನು ಪ್ರತಿಕ್ರಿಯೆ ನೀಡಿದ್ದೆ. ಅಂದು ಸಿದ್ದರಾಮಯ್ಯನವರು ಸಿಎಂ ಆಗಿದ್ದರು. ಕಾಂಗ್ರೆಸ್ ನವರ ಮೇಲೆ ಕ್ರಮ ಕೈಗೊಂಡ್ರಾ?. ಇಂದು ಅರೆಸ್ಟ್ ಆಗಿದ್ದಾರಲ್ಲ ಶ್ರೀ ಕೃಷ್ಣ ಯಾವ ಹೋಟೆಲ್‌ನಲ್ಲಿದ್ದ ಗೊತ್ತಿದೆ. ಹೋಟೆಲ್ನವರೆ ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸಿದ್ದರು. ನಾನು ಈ ವಿಚಾರದಲ್ಲಿ ಭಾಗಿಯಾಗೋದಿಲ್ಲ. ನನಗೆ ನಮ್ಮ ಪಕ್ಷದ ಸಂಘಟನೆ ಮುಖ್ಯ.
ಪ್ರಕರಣ ತನಿಖೆ ಹಂತದಲ್ಲಿದೆ. ಇದರಲ್ಲಿ ಕಾಂಗ್ರೆಸ್ ನವರು ಇದ್ದಾರೋ, ಬಿಜೆಪಿಯವರು ಇದ್ದಾರೋ ಗೊತ್ತಿಲ್ಲ. ಓಂ ಪ್ರಕಾಶ್ ಕೌಟಾಲ ಅವರೊಬ್ಬರಿಗೆ ಕಂಟಕ ಆಗಿರೋದು. ಬೇರೆ ಯಾರಿಗೂ ಏನೂ ಆಗುವುದಿಲ್ಲ. ಇಡಿ, ಸಿಐಡಿ ಇದೆ. ತನಿಖೆ ಮಾಡಲಿ ಎಂದರು.