ಬೆಂಗಳೂರು :ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ. ನಮ್ಮ ಹೆಮ್ಮೆಯ ಕಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದನ್ನು ಬಿಟ್ಟು ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪ್ರತಾಪ ತೋರಿಸುವುದು ಬೇಡ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಶಿವಾಜಿ ಪ್ರತಿಮೆ ವಿರೂಪ ಮಾಡಿದ ವಿಷಯವನ್ನು ಪ್ರಸ್ತಾಪ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಅನಗತ್ಯ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪದವಿಯಲ್ಲಿದ್ದು ಒಕ್ಕೂಟ ವ್ಯವಸ್ಥೆ ಆಶಯವನ್ನು ಗಾಳಿಗೆ ತೂರುವ ಉದ್ಧಟತನದ ಮಾತೇಕೆ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಶಿವಾಜಿ ಮಹಾರಾಜರ ಬಗ್ಗೆ ಗೌರವ ಕೊಡೋಣಾ, ಹಾಗಂತ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಬಗ್ಗೆ ಮರಾಠಿಗರಿಗೆ ಅಸಡ್ಡೆ ಯಾಕೆ? ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಗಲಿ ಎಂದು ಹೋರಾಟ ನಡೆಸಿದ ರಾಯಣ್ಣನವರ ಪ್ರತಿಮೆ ಹಾಳು ಮಾಡಿದ ಕೆಟ್ಟ ಮನಸ್ಸುಗಳಿಗೆ ಏನು ಹೇಳುವುದು.