ಕರ್ನಾಟಕ

karnataka

ETV Bharat / state

ಪಾಪದ ಹಣ ತೆಗೆದುಕೊಂಡು ನಿಷ್ಠಾವಂತ ಕಾರ್ಯಕರ್ತರಿಗೆ ವಿಷ ಹಾಕುವುದಿಲ್ಲ: ಹೆಚ್.ಡಿ. ಕುಮಾರಸ್ವಾಮಿ - ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆ

ನಗರದ ಸುಂಕದಕಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಆಯೋಜಿಸಿದ್ದ ಪ್ರಚಾರದ ಸಭೆಯಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, 'ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದರು'.

hd kumaraswamy
ಹೆಚ್.ಡಿ.ಕುಮಾರಸ್ವಾಮಿ

By

Published : Oct 15, 2020, 10:37 PM IST

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಪಾಪದ ಹಣ ತೆಗೆದುಕೊಂಡು ನಿಷ್ಠಾವಂತ ಕಾರ್ಯಕರ್ತರಿಗೆ ವಿಷ ಹಾಕುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಸುಂಕದಕಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ರಾಜಕಾರಣದಲ್ಲಿ ಪಾಪದ ಹಣಕ್ಕೆ ಎಂದಿಗೂ ಆಸೆ ಪಟ್ಟವನಲ್ಲ. ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಕೃಷ್ಣಮೂರ್ತಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದು, ಅಭ್ಯರ್ಥಿಯನ್ನು ಹರಕೆ ಕುರಿ ಮಾಡಲು ಹೊರಟ್ಟಿದ್ದೇನೆ ಎಂಬ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದ ಆಪಾದನೆ. ಕೃಷ್ಣಮೂರ್ತಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ರಾಜಿ ಮಾಡಿಕೊಂಡಿದ್ದೇನೆ ಎಂಬ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದರು.

ಬೆಂಗಳೂರು ನಗರಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ದೊಡ್ಡಮಟ್ಟದಲ್ಲಿ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ವರ್ತುಲ ರಸ್ತೆಗೆ ರಕ್ಷಣಾ ಇಲಾಖೆಯ ಭೂಮಿಯನ್ನು ಬಿಡಿಸಿಕೊಟ್ಟಿದ್ದರು. ನಗರದ ನಿವಾಸಿಗಳಿಗೆ 9 ಟಿಎಂಸಿ ಕಾವೇರಿ ನೀರು ಸಿಗುವಂತೆ ಮಾಡಿದ್ದರು. ನಗರ ಪ್ರದೇಶದ ಬಡವರಿಗೂ ಎರಡು ರೂಪಾಯಿಗೆ ಅಕ್ಕಿ ಸಿಗುವಂತೆ ಮಾಡಿದ ಕೊಡುಗೆಯು ದೇವೇಗೌಡ ಅವರಿಗೆ ಸಲ್ಲಬೇಕು. ಅಲ್ಲದೇ, ಏಳು ನಗರಸಭೆ, ಕೆಂಗೇರಿ ಪುರಸಭೆ ಮಾಡಿದ ಕೀರ್ತಿಯು ದೇವೇಗೌಡ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್‌ನ ಅಭ್ಯರ್ಥಿಯ ತಂದೆಯವರು ಸಹ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದು ಸಹ ದೇವೇಗೌಡ ಅವರ ಕೃಪೆಯಿಂದಾಗಿ. ಅವರು ಹಲವು ಬಾರಿ ಪಕ್ಷಾಂತರ ಮಾಡಿದ್ದಾರೆ. ಪಕ್ಷಾಂತರಿಗಳಿಗೆ ಟಿಕೆಟ್ ನೀಡಬಾರದು ಎಂಬ ಕಾರಣಕ್ಕಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ ಎಂದರು.

ಬಡವರಿಗೆ ಬಡ್ಡಿರಹಿತ ಸಾಲ ಲಭ್ಯವಾಗಬೇಕು ಎಂಬ ಕಾರಣಕ್ಕಾಗಿ ಬಡವರ ಬಂಧು ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ನನ್ನ 14 ತಿಂಗಳ ಆಡಳಿತ ಅವಧಿಯಲ್ಲಿ 15 ಸಾವಿರ ಕುಟುಂಬಗಳಿಗೆ ಯೋಜನೆ ಪ್ರಯೋಜನ ನೀಡಲಾಯಿತು. ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಆ ಯೋಜನೆಯನ್ನು ಸ್ಥಗಿತಗೊಳಿಸಿತು. ಕೊರೊನಾ ಅನಾಹುತ ಪರಿಹಾರವಾಗಿ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂ. ಘೋಷಣೆ ಮಾಡಿದರು. ಈವರೆಗೆ ಆ ಹಣ ತಲುಪಿಲ್ಲ. ರಾಜ್ಯ ಸರ್ಕಾರ ಸಹ 1,600 ಕೋಟಿ ರೂ. ಪರಿಹಾರ ಘೋಷಿಸಿತು. ವಿವಿಧ ವರ್ಗಗಳಿಗೂ ಪರಿಹಾರ ಘೋಷಣೆ ಮಾಡಲಾಯಿತು. ಆದರೆ ಅದು ಎಷ್ಟರ ಮಟ್ಟಿಗೆ ತಲುಪಲು ಸಾಧ್ಯವಾಯಿತು? ಹೇಗೆ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿಲ್ಲ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದಲ್ಲಿ ನಿಸ್ಸೀಮರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದಿದ್ದ ವೇಳೆ ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದರು ಎಂದು ಹೇಳಿದರು.

ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ದೂರುತ್ತಿದ್ದಾರೆ. ನನ್ನ ಆಡಳಿತವಧಿಯಲ್ಲಿ ಅಂತಹ ಮಾತುಗಳು ಕೇಳಲಿಲ್ಲ. ಯಾಕೆಂದರೆ ಜನಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗಿತ್ತು. ಹೀಗಾಗಿ ಕ್ಷೇತ್ರದ ಜನತೆ ಜೆಡಿಎಸ್‌ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ನ ಸಂಸದರಿಗೆ ಈಗ ಕ್ಷೇತ್ರದ ಮೇಲೆ ಪ್ರೀತಿ ಬಂದಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡದೆ 250 ಕೋಟಿ ರೂ. ಹಣ ಲೂಟಿ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿದೆ. ಲೂಟಿ ಮಾಡಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ. ದಬ್ಬಾಳಿಕೆ ಮೂಲಕ ಮತ ಪಡೆಯಲು ಪ್ರಯತ್ನಿಸುತ್ತಾರೆ. ರಾಜಕಾರಣದಲ್ಲಿ ಹಣ ಮಾಡಿ ದುರಂಹಕಾರದಿಂದ ವರ್ತಿಸುತ್ತಾರೆ. ಅವರ ಮಾತುಗಳಿಗೆ ಮರುಳಾಗಬಾರದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಅವರು, ಕಾಂಗ್ರೆಸ್‌ನಲ್ಲಿದ್ದ ಮುನಿರತ್ನ ಬಿಜೆಪಿಗೆ ಏಕೆ ಹೋದರು? ನಮ್ಮ ಕುಮಾರಣ್ಣ ಅನುದಾನ ನೀಡಿರಲಿಲ್ಲವಾ..? ಬೆನ್ನಿಗೆ ಚೂರಿ ಹಾಕಿ ಬಿಜೆಪಿಗೆ ಹೋಗಿ ಮುನಿರತ್ನ ಹಣ ಗಳಿಸಿದ್ದಾರೆ ಎಂದು ಪ್ರಶ್ನಿಸಿ ಕಿಡಿಕಾರಿದರು. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಕುಮಾರಣ್ಣ ಗುರುತಿಸಿ ಟಿಕೆಟ್‌ ನೀಡಿದ್ದಾರೆ ಎಂಬುದನ್ನು ಇಡೀ ಕರ್ನಾಟಕವೇ ನೋಡುತ್ತಿದೆ. ಕಾರ್ಯಕರ್ತರ ಮೇಲೆ 1,600 ಕೇಸ್ ಹಾಕಿಕಿದರೂ ಈಗ ತತ್ವ ಸಿದ್ಧಾಂತ ಎಲ್ಲಿ ಹೋಯ್ತು ಎಂದು ಸವಾಲ್ ಹಾಕಿದರು.

ABOUT THE AUTHOR

...view details