ಕರ್ನಾಟಕ

karnataka

ETV Bharat / state

ಭಗವದ್ಗೀತೆ, ಭಾಷೆ, ದೇಶ, ಧರ್ಮ ಬೇಕಾಗಿದೆ, ಅದರ ಬಗ್ಗೆ ಮಾತಾಡಿದ್ರೆ ಪ್ರಚಾರ ಸಿಗುತ್ತೆ : ಜನರ ಮನಸ್ಥಿತಿಗೆ ಹೆಚ್​ಡಿಕೆ ಅಸಮಾಧಾನ - ರಾಜ್ಯದ ಜನತೆ ಮಸ್ಥಿತಿ ಬಗ್ಗೆ ಹೆಚ್​ಡಿಕೆ ಅಸಮಾಧಾನ

ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರನ್ನು ಕುಡಿಯುವ ಹಕ್ಕಿದೆ. ಅವರ ನೀರನ್ನು ಕೊಡದಿದ್ದಾಗ ಅವರು ಕೇಳಬೇಕು. ನಮ್ಮ ಭಾಗದಲ್ಲಿ ಜಲಾಶಯ ಕಟ್ಟೋಕೆ ತಕರಾರು ಇಲ್ಲ ಎಂದು ತಮಿಳುನಾಡು ವಕೀಲರೆ ಹೇಳಿದ್ದಾರೆ. ಕುಡಿಯುವ ನೀರಿಗೆ ಯಾವುದೇ ತಕಾರಾರಿಲ್ಲ ಎಂದು ಹೇಳಲಾಗಿದೆ. ನಮಗೆ ಪರಿಸರ ಇಲಾಖೆಯ ಅನುಮತಿ ಬೇಕಾಗಿದೆ ಎಂದರು..

HD Kumaraswamy displeasure about state people mentality
ರಾಜ್ಯದ ಜನತೆ ಮಸ್ಥಿತಿ ಬಗ್ಗೆ ಹೆಚ್​ಡಿಕೆ ಅಸಮಾಧಾನ

By

Published : Mar 22, 2022, 12:50 PM IST

ಬೆಂಗಳೂರು :ಜನರಿಗೆ ಈಗ ಭಗವದ್ಗೀತೆ, ಭಾಷೆ, ದೇಶ, ಧರ್ಮ ಬೇಕಾಗಿದೆ. ಅದರ ವಿರುದ್ಧ ಮಾತನಾಡಿದರೆ ಮತ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ರಾಜ್ಯದ ಜನತೆ ಮಸ್ಥಿತಿ ಬಗ್ಗೆ ಹೆಚ್​ಡಿಕೆ ಅಸಮಾಧಾನ ವ್ಯಕ್ತಪಡಿಸಿರುವುದು..

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರಿಗೆ ಈಗ ಧರ್ಮದ ಅವಶ್ಯಕತೆ ಇದೆ. ಭಗವದ್ಗೀತೆ, ಭಾಷೆ, ದೇಶ, ಧರ್ಮ ಬೇಕಾಗಿದೆ. ಜನರಿಗೆ ಹಣದುಬ್ಬರದ ಬಗ್ಗೆ ಚಿಂತೆ ಇಲ್ಲ. ಬೆಲೆ ದುಬಾರಿಯಾದರೂ ಅದನ್ನು ಮೌನವಾಗಿ ದುಡ್ಡು ಕೊಡುವಂಥ ಶಕ್ತಿ ಬೆಳೆಸಿಕೊಂಡಿದ್ದಾರೆ.

ಬೆಲೆ ಏರಿಕೆಯಾದರೆ ಜನರು ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಯದ ಜನರಿಗೆ ಈಗ ಬಿಜೆಪಿಯ ಹಿಡನ್ ಅಜೆಂಡಾ ಬೇಕಾಗಿದೆ. ಜನರು ಈಗ ಆರ್ಥಿಕವಾಗಿ ಸದೃಢರಾಗಿದ್ದಾರೆ. ನಾವು ಹಣದುಬ್ಬರದ ಬಗ್ಗೆ ಮಾತನಾಡಿದರೆ ಅದಕ್ಕೆ ಯಾವುದೇ ಮಹತ್ವ ಸಿಗುವುದಿಲ್ಲ. ಈಗೇನಿದ್ದರೂ ಭಗವದ್ಗೀತೆ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗುತ್ತದೆ ಎಂದು ತಿಳಿಸಿದರು.

ಇಂತಹ ವಿಚಾರಗಳ ವಿರುದ್ಧ ಮಾತನಾಡಲು ರಾಜಕಾರಣಿಗಳೇ ಭಯ ಬೀಳುತ್ತಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೋರಾಗಿ ಮಾತನಾಡುತ್ತಿದ್ದರು. ಅವರೇ ಭಗವದ್ಗೀತೆ ಬಗ್ಗೆ ಕೇಳಿದಾಗ ಭಯ ಬಿದ್ದು ಪಠ್ಯದಲ್ಲಿ ಸೇರಿಸಿ ಪರವಾಗಿಲ್ಲ ಎಂದಿದ್ದಾರೆ. ಇನ್ನು‌ ಹಿಜಾಬ್ ಬಗ್ಗೆಯೂ ಮಾತನಾಡಿಲ್ಲ. ಅವರೇ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ವೋಟಿಗಾಗಿ ರಾಜಕಾರಣಕ್ಕೆ ಬಂದಿಲ್ಲ :ಉಡುಪಿ,ಶಿವಮೊಗ್ಗ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದ್ದಾರೆ. ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ. ಇದರ ಬಗ್ಗೆ ಧ್ವನಿ ಎತ್ತುವವರು ಯಾರು?, ಧ್ವನಿ ಎತ್ತಿದ್ರೆ ಜನ ಮತ ಹಾಕಲ್ಲ. ಆದರೆ, ನಾನು ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಜನ ಮತ ಹಾಕದಿದ್ದರೂ ಪರವಾಗಿಲ್ಲ.‌ ನಾನಂತೂ ಮಾತನಾಡುತ್ತೇನೆ. ನಾನು ವೋಟಿಗಾಗಿ ರಾಜಕಾರಣಕ್ಕೆ ಬಂದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಮೇಕೆದಾಟು ಯೋಜನೆ ವಿಚಾರವಾಗಿ ಹೆಚ್​ಡಿಕೆ ಪ್ರತಿಕ್ರಿಯೆ ನೀಡಿರುವುದು..

ತಮಿಳುನಾಡು ನಿರ್ಣಯಕ್ಕೂ ನಮಗೂ ಸಂಬಂಧ ಇಲ್ಲ :ತಮಿಳುನಾಡು ವಿಧಾನಸಭೆಯಲ್ಲಿ‌ ತೆಗೆದುಕೊಂಡ ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ. ಮೇಕೆದಾಟು ಸಂಬಂಧ ರಾಜ್ಯ ಸರ್ಕಾರ ಬದ್ಧತೆ ತೋರಿಸಬೇಕು. ಎಲ್ಲವೂ ಸರ್ಕಾರದ ಕೈಯಲ್ಲಿದೆ. ನಮ್ಮ ನೀರನ್ನು ಪಡೆಯುವುದರಲ್ಲಿ ಅನ್ಯಾಯವಾಗಿದೆ.

ಅದನ್ನು ಸರ್ಕಾರ ತ್ವರಿತಗತಿಯಲ್ಲಿ ಸರಿಪಡಿಸಬೇಕು. ನಿನ್ನೆ ವಿಧಾನಸಭೆಯಲ್ಲಿ ಎಲ್ಲಾ ಪಕ್ಷಗಳು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು ಎಂದು ಬಿಲ್ ಪಾಸ್ ಮಾಡಿದ್ದಾರೆ. ಅಕ್ಕಪಕ್ಕದ ರಾಜ್ಯಗಳ ಮೇಲೆ ಅದರಲ್ಲೂ ಕರ್ನಾಟಕದ ಮೇಲೆ ತಮಿಳುನಾಡು ಸರ್ಕಾರ ಒತ್ತಡ ಹೇರುವುದು ನಿರಂತರವಾಗಿ ನಡೆಯುತ್ತಿದೆ.

ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರನ್ನು ಕುಡಿಯುವ ಹಕ್ಕಿದೆ. ಅವರ ನೀರನ್ನು ಕೊಡದಿದ್ದಾಗ ಅವರು ಕೇಳಬೇಕು. ನಮ್ಮ ಭಾಗದಲ್ಲಿ ಜಲಾಶಯ ಕಟ್ಟೋಕೆ ತಕರಾರು ಇಲ್ಲ ಎಂದು ತಮಿಳುನಾಡು ವಕೀಲರೆ ಹೇಳಿದ್ದಾರೆ. ಕುಡಿಯುವ ನೀರಿಗೆ ಯಾವುದೇ ತಕಾರಾರಿಲ್ಲ ಎಂದು ಹೇಳಲಾಗಿದೆ. ನಮಗೆ ಪರಿಸರ ಇಲಾಖೆಯ ಅನುಮತಿ ಬೇಕಾಗಿದೆ ಎಂದರು.

ಮೇಕೆದಾಟು ಯೋಜನೆ ಆರಂಭಿಸಬೇಕು :ಸರ್ಕಾರ ಮೇಕೆದಾಟು ಯೋಜನೆಗೆ 1,000 ಕೋಟಿ ಇಟ್ಟರೆ ಸಾಲದು ಕೆಲಸ ಆಗಬೇಕು. ಕಾವೇರಿ ಡೆಲ್ಟಾ ಜಾಗದಲ್ಲಿ ತಮಿಳುನಾಡು ಸರ್ಕಾರ ಕೆಲ ಚಟುವಟಿಕೆ ನಡೆಸುತ್ತಿದೆ. ಏನು ಚಟುವಟಿಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವತ್ತೂ ತಮಿಳುನಾಡು ಚಟುವಟಿಕೆಗೆ ಎಂದಿಗೂ ವಿರೋಧ ಮಾಡಿಲ್ಲ. ಅವರ ಚಟುವಟಿಕೆ ನಡೆಯುತ್ತಲೇ ಇದೆ. ಮೇಕೆದಾಟು ಯೋಜನೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ದೇವೇಗೌಡ್ರು ಸರ್ಕಾರಕ್ಕೆ ಎರಡು ರೀತಿಯ ಸಲಹೆ ನೀಡಿದ್ದಾರೆ. ನಾನು ಕೂಡ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಸರ್ವಪಕ್ಷ ನಾಯಕರನ್ನು ದೆಹಲಿಗೆ ಕರೆದೊಯ್ಯುವ ವಿಚಾರವನ್ನು ಸಭೆಯಲ್ಲಿ ಹೇಳಿದ್ದಾರೆ. ಸೋಮವಾರ ಗೋವಿಂದ ಕಾರಜೋಳ ದೆಹಲಿಗೆ ಹೋಗಿದ್ದಾರೆ. ನಂತರ ಸಂಸದರ ನಿಯೋಗ ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದರು.

ಎಸಿಬಿ ದಾಳಿ ಕೇವಲ ಐ ವಾಷ್ :ಬಿಡಿಎ ಬ್ರೋಕರ್‌ಗಳ ಮೇಲೆ ಎಸಿಬಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಐ ವಾಷ್‌ಗೋಸ್ಕರ ಎಸಿಬಿ ದಾಳಿ ನಡೆಯುತ್ತಿದೆ. ಎಸಿಬಿ ರೈಡ್ ತೋರ್ಪಡಿಕೆಗೆ ನಡೆಯುತ್ತಿದೆ. ಯಾವುದೇ ಪರಿಣಾಮ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಸಿಬಿಯಿಂದ ಇತ್ತೀಚಿನ ದಾಳಿ ಪ್ರಕರಣವನ್ನು ನೋಡುತ್ತಿದ್ದೇನೆ. ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಎಷ್ಟು ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಆಗಿದೆ. ಕೇವಲ ಎಸಿಬಿ ದಾಳಿ ನಡೆಸಿದರೆ ಪರಿಣಾಮ ಸಿಗಲ್ಲ. ಏನು ಕ್ರಮ ಆಗಿದೆ ಅನ್ನೋದು ಯಾರಿಗೂ ಮಾಹಿತಿ ಇಲ್ಲ ಎಂದರು.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

For All Latest Updates

TAGGED:

ABOUT THE AUTHOR

...view details