ಬೆಂಗಳೂರು :ರಾಜ್ಯವು ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಅಮಿತ್ ಶಾ ಅವರಿಗೆ ರಾಜ್ಯದ ಕಾವೇರಿ ಕುರಿತ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇನೆ. ಕಾವೇರಿ ಸಮಸ್ಯೆ, ಬರ ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ ಎಂದರು.
ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಹಳ ಅಸಡ್ಡೆ ಪ್ರದರ್ಶಿಸಿದೆ. ಕನ್ನಡನಾಡಿನ ರೈತರು, ಜನರ ವಿಷಯದಲ್ಲಿ ಚೆಲ್ಲಾಟವಾಡಿದೆ. ಒಂದು ಕಡೆ ನೀರಿಲ್ಲ ಎಂದು ಸರ್ಕಾರವೇ ಹೇಳುತ್ತದೆ. ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತದೆ. ಸುಪ್ರೀಂ ಕೋರ್ಟ್ ಮುಂದೆ ಅತ್ಯಂತ ತಡವಾಗಿ ಅರ್ಜಿಯನ್ನು ಹಾಕಿದೆ ಸರ್ಕಾರ. ರೈತರ ಬಗ್ಗೆ ಇವರಿಗೆ ಬದ್ಧತೆ ಎನ್ನುವುದು ಇದ್ದಿದ್ದರೆ, ಅರ್ಜಿ ಸಲ್ಲಿಸುವ ಬಗ್ಗೆ ವಿಳಂಬ ಮಾಡುತ್ತಿರಲಿಲ್ಲ ಎಂದು ದೂರಿದರು. ರೈತರ ಹಿತರಕ್ಷಣೆ ಮಾಡುವ ಕೆಲಸ ಮಾಡಬೇಕು. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯವಿದೆ. ಕನ್ನಡಿಗರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಡಬೇಡಿ ಎಂದು ನಾನು ಸಲಹೆ ಮಾಡಿದ್ದೆ. ಆದರೆ ಸರ್ಕಾರ ನನ್ನ ಮಾತನ್ನು ಕೇಳಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೋರ್ಟ್ ಆದೇಶದಿಂದ ಪಾರಾಗಲು ಮಾರ್ಗವಿದೆ : ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ಒಂದು ಆದೇಶವನ್ನು ಗಮನಿಸಿದ್ದೇನೆ. ಒಂದು ವೇಳೆ ಕೋರ್ಟ್ ಪಾಲಿಸಲಾಗದ ಕಠಿಣ ಆದೇಶವನ್ನೇನಾದರೂ ನೀಡಿದರೆ, ಅಂತಹ ಸಂಕಷ್ಟ ಸಮಯದಲ್ಲಿ ಆಯಾ ರಾಜ್ಯ ಸರ್ಕಾರ ಜನರ ಪರವಾಗಿ ಕೈಗೊಳ್ಳುವ ನಿರ್ಧಾರವು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗುವುದಿಲ್ಲ. ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಒಂದು ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಪಡೆದು ದಿಟ್ಟ ಕ್ರಮ ಕೈಗೊಳ್ಳಲಿ ಎಂದು ಹೆಚ್ಡಿಕೆ ಒತ್ತಾಯಿಸಿದರು.
ಗ್ಯಾರಂಟಿಗಳ ನಿತ್ಯ ಭಜನೆ : ರಾಜ್ಯದ ಜನರ ಹಿತ ರಕ್ಷಣೆಗೆ ಇಂಥ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡದೆ, ಕಾಂಗ್ರೆಸ್ ಸರ್ಕಾರ ಕೇವಲ ಐದು ಗ್ಯಾರಂಟಿಗಳ ಬಗ್ಗೆ ನಿತ್ಯವೂ ಭಜನೆ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಿದ ಮೂವರು ನ್ಯಾಯಮೂರ್ತಿಗಳಿದ್ದಾರೆ. ಅದೇ ಸುಪ್ರೀಂ ಕೋರ್ಟ್ನ ಹಲವಾರು ವಿಶ್ರಾಂತ ನ್ಯಾಯಮೂರ್ತಿಗಳು ರಾಜ್ಯದಲ್ಲಿದ್ದಾರೆ. ಅಡ್ವೋಕೇಟ್ ಜನರಲ್ಗಳಾಗಿ ಕೆಲಸ ಮಾಡಿದ ಆರು ಜನ ಕಾನೂನು ತಜ್ಞರಿದ್ದಾರೆ. ಇವರೆಲ್ಲರನ್ನೂ ಆಹ್ವಾನಿಸಿ ಚರ್ಚೆ ಮಾಡಬೇಕಿತ್ತಲ್ಲವೇ? ಅಂಥವರನ್ನು ಕರೆದು ಸಭೆ ಮಾಡುವ ಸಾಮಾನ್ಯ ಜ್ಞಾನ ಇವರಿಗೆ ಇಲ್ಲ ಎಂದು ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.