ಬೆಂಗಳೂರು: ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಕಿಡಿಗೇಡಿತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ಡಿಕೆ, ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ನಡೆಸಬಾರದೇ? ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗರನ್ನು ಬಂಧಿಸಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? ಇಷ್ಟಕ್ಕೂ ಕನ್ನಡಿಗರು ಮತ ಹಾಕಿದ್ದು ಯಾರಿಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಂ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಒದಿ: ಬೆಂಗಳೂರು ಬಂದ್: ನಗರದಲ್ಲಿ ಎಂದಿನಂತೆ ಬಿಎಂಟಿಸಿ ಬಸ್, ಖಾಸಗಿ ವಾಹನ ಸಂಚಾರ
ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್ಗೆ ನನ್ನ ಸಂಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ, ಬಂದ್ ಯಶಸ್ವಿ ಆಗಲಿ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಕೂಡ ಬಂದ್ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶಾಲೆಗಳಿಗೆ ರಜೆ: ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅದೇ ರೀತಿ ಖಾಸಗಿ ಶಾಲೆಗಳ ಒಕ್ಕೂಟದಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ವಿಶ್ವವಿದ್ಯಾಲಯ ಕಾಲೇಜುಗಳು ಈ ಮೊದಲೇ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿವೆ. ಆಸ್ಪತ್ರೆಗಳು ಎಂದಿನಂತೆ ತೆರೆದಿವೆ. ಆದರೆ ರೋಗಿಗಳು ಆಸ್ಪತ್ರೆಗಳಿಗೆ ತೆರೆಯಲು ವಾಹನಗಳಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.
ಇದನ್ನೂ ಓದಿ: ಇಂದು ಬೆಂಗಳೂರು ಬಂದ್: ಶಾಲಾ-ಕಾಲೇಜಿಗೆ ರಜೆ, ಆಟೋ, ಟ್ಯಾಕ್ಸಿ ಸಿಗಲ್ಲ; ಏನಿರುತ್ತೆ, ಏನ್ ಇರಲ್ಲ?
ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ರೈತ ಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್ಗೆ ಕರೆ ಕೊಟ್ಟಿವೆ. ಬಂದ್ ಹಿನ್ನೆಲೆಯಲ್ಲಿ ನೂರಾರು ಸಂಘಟನೆಗಳ ಸದಸ್ಯರು ಟೌನ್ ಹಾಲ್ನಿಂದ ಫ್ರೀಡಂ ಪಾರ್ಕಿನವರೆಗೂ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆಸಲಿದ್ದಾರೆ. ಈ ವೇಳೆ ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿಯಾಗುವುದರಿಂದ ಆರಂಭದಲ್ಲಿಯೇ ಕೆಲವರನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜನರ ಗುಂಪು ಸೇರುವಂತಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದ್ದು, ಕರೆದೊಯ್ಯಲು ಹತ್ತು ಬಿಎಂಟಿಸಿ ಬಸ್‌ಗಳನ್ನ ಈಗಾಗಲೇ ಕಾಯ್ದಿರಿಸಲಾಗಿದೆ. ಟೌನ್ ಹಾಲ್ ಬಳಿ ಮುನ್ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದಾರೆ. ಜೊತೆಗೆ ಬೆಂಗಳೂರಿನಾದ್ಯಂತ ಪೊಲೀಸ್ ಬಂದೋಬಸ್ಲ್ ಕಲ್ಪಿಸಲಾಗಿದೆ.