ಕರ್ನಾಟಕ

karnataka

ETV Bharat / state

ಮಾತಿನಲ್ಲಿ ಮೌಲ್ಯಗಳ ಮಥನ, ಕೊನೆಗೆ ಝಣ ಝಣ ಕಾಂಚಾಣ, ಇದೇ ಸಿಎಂ ಅಂತರಂಗ ಶುದ್ಧಿ: ಕುಮಾರಸ್ವಾಮಿ - ಮಾತಿನಲ್ಲಿ ಮೌಲ್ಯಗಳ ಮಥನ

ಎಕ್ಸ್​​ನಲ್ಲಿ ಸರಣಿ ಪೋಸ್ಟ್​ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್​ ಪಕ್ಷದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

HDK
ಹೆಚ್​ಡಿಕೆ ಟೀಕೆ

By ETV Bharat Karnataka Team

Published : Nov 18, 2023, 11:17 AM IST

ಬೆಂಗಳೂರು:ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತು ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ.. ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು ಎಂದು ಕಾಸಿಗಾಗಿ ಹುದ್ದೆ ಹ್ಯಾಷ್ ಟ್ಯಾಗ್ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದ್ದಾರೆ.

ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ!! ಡೂಪ್ಲಿಕೇಟ್‌ ಸಿಎಂ-ಡಿಸಿಎಂ ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್ಆರ್ ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ ಎಂದು ವ್ಯಂಗ್ಯವಾಡಿದ್ದಾರೆ.

ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್‌ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್‌ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು..ಅದು ನಿಮ್ಮ ದುರ್ವಿಧಿ. ಆನ್ಸರ್‌ ಮಾಡಿ ಸಿದ್ದರಾಮಯ್ಯನವರೇ..? ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ; 71 ಪೊಲೀಸ್‌ ಇನಸ್ಪೆಕ್ಟರ್‌ʼಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲಾ ನಿಮ್ಮ 'ಸುಲಿಗೆಪುತ್ರ'ನ ಕೆಚ್ಚು! ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ. ಏನಂತೀರಿ? ಎಂದು ಕುಹಕವಾಡಿದ್ದಾರೆ.

ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. 'ವರ್ಗಾವರ್ಗಿ ಬಜೆಟ್‌'ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ!! 'ಕಾಸಿಗಾಗಿ ಹುದ್ದೆ & ಕಾಂಗ್ರೆಸ್‌ ಹುಂಡಿ' ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ ನಿರ್ಮಾಪಕ, ಡೂಪ್ಲಿಕೇಟ್‌ ಸಿಎಂ ನಿರ್ದೇಶಕ.. ಹೇಗಿದೆ? ಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ.. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್‌ & ರನ್‌ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಕನಕಪುರದಲ್ಲಿ ಹೀನಾಯವಾಗಿ ಸೋತವರು ಈಗ ವಿಪಕ್ಷ ನಾಯಕ: ಕಾಂಗ್ರೆಸ್ ಟೀಕೆ

ABOUT THE AUTHOR

...view details