ಬೆಂಗಳೂರು: ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ ಪ್ರಚಾರದ ಅಂತಿಮ ಸುತ್ತಿಗೆ ಬಂದಿದ್ದೇವೆ. ಪ್ರಮುಖವಾಗಿ ಈ ಚುನಾವಣೆಗೆ ನಮ್ಮ ಪಕ್ಷದ ನಿಲುವಿನ ಬಗ್ಗೆ ಸಾರ್ವಜನಿಕರಿಗೆ ಭಾರೀ ಕುತೂಹಲ ಇತ್ತು.
ಇದರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಮಾತು ಹರಿದಾಡುತ್ತಿತ್ತು. ಈ ರೀತಿ ಯಾವ ಮೈತ್ರಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಚುನಾವಣಾ ಪ್ರಚಾರದ ಆರಂಭದಿಂದಲೂ ಕಾಂಗ್ರೆಸ್ ನಾಯಕರು ನಮ್ಮನ್ನು ಬಿಜೆಪಿಯ B ಟೀಂ ಎಂಬ ರಾಜಕೀಯ ಮಂತ್ರ ಪಠಿಸುತ್ತಿದ್ದಾರೆ. ಜೊತೆಗೆ ನಮ್ಮ ಪಕ್ಷ ಜಾತ್ಯಾತೀತವಲ್ಲ ಎಂದೂ ಸಹ ಹೇಳುತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ಸೋಲಿಸಲು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಬಿಜೆಪಿಯಿಂದಲೂ ಸಹ ಈ ಚುನಾವಣೆಯಲ್ಲಿ ನಮ್ಮನ್ನು ಬೆಂಬಲ ನೀಡುವಂತೆ ಕೋರಿಲ್ಲ. ಆದರೆ, ಎಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲವೋ ಅಲ್ಲಿ ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿ ಎಂದು ಬಿಎಸ್ವೈ ಹೇಳಿದ್ದಾರೆ.
ಈ ಸಂಬಂಧ ಸಿಎಂ ಬೊಮ್ಮಾಯಿ ಅವರನ್ನ ಕೇಳಿದಾಗ ಅದರ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದರ ಜೊತೆ ಮೊನ್ನೆ ಅಷ್ಟೇ, ಬಿಜೆಪಿ ಮೈತ್ರಿ ಅಲ್ಲ ಕೇವಲ ಎಲ್ಲಿ ಅಭ್ಯರ್ಥಿಗಳನ್ನು ಹಾಕುವುದಿಲ್ಲವೋ ಅಲ್ಲಿ ನಮಗೆ ಬೆಂಬಲ ನೀಡಿ ಎಂದಷ್ಟೇ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಆರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಿಂತಿದ್ದಾರೆ. ಆರು ಕ್ಷೇತ್ರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಇಲ್ಲಿ ತ್ರಿಕೋನ ಸ್ಪರ್ಧೆ ಇರುತ್ತದೆ. ನಮ್ಮ ಸಂಖ್ಯೆ ಹಲವಾರು ಜಿಲ್ಲೆಗಳಲ್ಲಿ ಇದೆ. ಚಿತ್ರದುರ್ಗ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್ ಕ್ಷೇತ್ರದ ಮತಗಳು ನಿರ್ಣಾಯಕ ಎಂದರು.
ನಮ್ಮ ಗುರಿ 2023ರ ಸಾರ್ವತ್ರಿಕ ಚುನಾವಣೆ ಮೇಲಿದೆ. ಈ ಹಿಂದೆ ಮಾಡಲಾದ ಕಾರ್ಯಾಗಾರದ ಉದ್ದೇಶವೇ ಅದು. ಮುಂದಿನ ವರ್ಷದಿಂದ ನಿರಂತರವಾಗಿ ಸಂಘಟನೆ ಮಾಡಲು ಮುಂದಾಗುತ್ತೇವೆ. ಈ ಬಾರಿ ಯಾವುದೇ ಮೈತ್ರಿ ಇಲ್ಲ ಎಂದು ಹೇಳಿದರು.