ಬೆಂಗಳೂರು: ಜನರ ಮೇಲೆ ಯಾವುದೇ ತೆರಿಗೆ ಭಾರ ಹಾಕದೇ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಸಂತಪುರದಲ್ಲಿ ನಿನ್ನೆ ಸಂಜೆ ಜೆಡಿಎಸ್ ಅಭ್ಯರ್ಥಿ ರಾಜಗೋಪಾಲ ರೆಡ್ಡಿ ಅವರ ಪರ ಪ್ರಚಾರ ಸಂದರ್ಭದಲ್ಲಿ ಅವರು ಮಾತನಾಡಿದರು.
ಪಂಚರತ್ನ ಯೋಜನೆಗಳು ಉಚಿತ ಕೊಡುಗೆಗಳು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವು ಉಚಿತ ಕೊಡುಗೆಗಳಲ್ಲ, ರೈತರು ಸೇರಿ ಎಲ್ಲ ವರ್ಗದ ಜನರನ್ನು ಆರ್ಥಿಕವಾಗಿ ಮೇಲೆತ್ತುವ ಹಾಗೂ ಸರ್ಕಾರಕ್ಕೆ ಆಸ್ತಿಗಳನ್ನು ಸೃಷ್ಟಿಸುವ ಯೋಜನೆಗಳಾಗಿವೆ ಎಂದು ಹೇಳಿದರು. ಈ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತಾರೆ? ಎಂದು ಕೆಲವರು ಕೊಂಕು ಮಾತನಾಡುತ್ತಿದ್ದಾರೆ. ಹೊಸ ತೆರಿಗೆ ಹಾಕದೆ, ಸಾಲ ಮಾಡದೆ ಆಂತರಿಕ ಸಂಪನ್ಮೂಲವನ್ನು ಕ್ರೋಢೀಕರಿಸಿ, ಜನರ ಹಣ ಲೂಟಿ ತಡೆಗಟ್ಟಿ ಹಣ ಹೊಂದಿಸುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.
ಎಲ್ಲರಿಗೂ ಉತ್ತಮ ಶಿಕ್ಷಣ:ಇಂದು ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳ ಭವಿಷ್ಯಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲ ಮಾಡುತ್ತಿದ್ದಾರೆ. ಜನರ ಸಹಕಾರದಿಂದ ಜನತಾ ಸರಕಾರ ಬಂದರೆ ಶಿಕ್ಷಣ ವ್ಯವಸ್ಥೆಗೆ ಚಿಕಿತ್ಸೆ ನೀಡುತ್ತೇನೆ. ಈ ಬಾರಿ ಕನ್ನಡಿಗರು ಪಂಚರತ್ನ ಯೋಜನೆಗಳ ಜಾರಿಗೆ ಜನಾದೇಶ ನೀಡಬೇಕು ಎಂದು ಮನವಿ ಮಾಡಿದರು.
ಮತ ಕೇಳಲು ಎರಡು ರಾಷ್ಟ್ರೀಯ ಪಕ್ಷಗಳ ರಾಷ್ಟ್ರೀಯ ಮುಖಂಡರು ಆಗಮಿಸಿದ್ದಾರೆ. ಪ್ರಧಾನಮಂತ್ರಿ ಬಂದಿದ್ದಾರೆ. ಪರಸ್ಪರ ಕೆಸರೆರಚಿಕೊಂಡು ಭಾವನಾತ್ಮಕ ವಿಚಾರಗಳ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಜನರ ಕಷ್ಟಗಳ ಬಗ್ಗೆ, ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಅವರು ಚರ್ಚೆ ಮಾಡುತ್ತಿಲ್ಲ. ಅಧಿಕಾರ ಬಿಟ್ಟರೆ ಅವರಿಗೆ ಬೇರೆ ಬೇಕಿಲ್ಲ ಎಂದು ಆರೋಪಿಸಿದರು.