ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸೇರಿದಂತೆ ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಆದೇಶಿಸಿದ್ದಾರೆ. ಇಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯ ನಂತರ ದೇವೇಗೌಡರು ಮಾಧ್ಯಮಗೋಷ್ಠಿ ನಡೆಸಿ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ವಿಸರ್ಜಿಸಿ ಆದೇಶ ಪ್ರಕಟಿಸಿದರು.
ಶಾಸಕಾಂಗ ಪಕ್ಷದ ನಾಯಕರಾಗಿರುವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಸಲು ನಾವೆಲ್ಲ ಒಟ್ಟಾಗಿ ಸೇರಿ ಸರ್ವಾನುಮತದಿಂದ ತೀರ್ಮಾನಿಸಿದ್ದೇವೆ. ಹಾಗೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸೇರಿದಂತೆ ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ವಿಸರ್ಜಿಸಿರುವುದಾಗಿ ಪಕ್ಷದ ವರಿಷ್ಠ ದೇವೇಗೌಡರು ತಿಳಿಸಿದರು.
ಜೆಡಿಎಸ್ ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿ ಆರ್ಟಿಕಲ್ (10) ಪ್ರಕಾರ ಕರ್ನಾಟಕ ಪ್ರದೇಶ ಜನತಾದಳ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ವಿಸರ್ಜನೆ ಮಾಡಲಾಗಿದೆ. ಹಾಗೆಯೇ ಪಕ್ಷದ ಕಾರ್ಯಚಟುವಟಿಕೆಗಳು ಸುಲಲಿತವಾಗಿ ನಡೆಸಿಕೊಂಡು ಹೋಗಲು ಹೆಚ್ ಡಿ ಕುಮಾರಸ್ವಾಮಿ ಅವರನ್ನು ಅಡಹಾಕ್ ಅಧ್ಯಕ್ಷನ್ನಾಗಿ ನೇಮಕ ಮಾಡಲಾಗಿದೆ ಎಂದು ಜೆಡಿಷ್ಠ ವರಿಷ್ಠ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದರು. ಜೆಡಿಎಸ್ ರಾಜ್ಯ ಕಾರ್ಯಕಾರಣಿ ವಿಸರ್ಜನೆ ಆದೇಶದಿಂದಾಗಿ ಸಿಎಂ ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷ ಪದವಿ ಕಳೆದುಕೊಂಡಿದ್ದಾರೆ.
ನನ್ನದೇ ಒರಿಜಿನಲ್ ಜೆಡಿಎಸ್ ಎಂದು ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಈ ಮೊದಲು ಕಿಡಿಕಾರಿದ್ದರು. ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಸಭೆ ನಡೆಸಿ ತೀರ್ಮಾನಿಸಬೆಕು. ಬಿಹಾರ ಸಿಎಂ ನಿತೀಶ್ ಕುಮಾರ್, ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ನಾಯಕರೂ ನನ್ನ ಜೊತೆ ಮಾತನಾಡಿದ್ದಾರೆ ಎಂದು ಸಿ ಎಂ ಇಬ್ರಾಹಿಂ ಈ ಹಿಂದೆ ಜೆಡಿಎಸ್ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ್ದರು.
ಯಾರ ಅಭಿಪ್ರಾಯ ಕೇಳದೆ ಕುಮಾರಸ್ವಾಮಿ ಅವರು ಏಕಾಏಕಿ ದೆಹಲಿಗೆ ಹೋಗಿ ಅಮಿತ್ ಶಾ ಜೊತೆಗೆ ಫೋಟೋ ತೆಗೆಸಿಕೊಂಡು ಎನ್ಡಿಎ ಜೊತೆಗಿನ ಮೈತ್ರಿಯನ್ನು ಘೋಷಣೆ ಮಾಡಿದ್ದಾರೆ. ಜೆಡಿಎಸ್ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತದಲ್ಲಿ ನಂಬಿಕೆ ಇಟ್ಟ ಪಕ್ಷವಾದ್ದರಿಂದ ನಾವು ಅಲ್ಲಿ ಹೋಗೋದು ಬೇಡ, ಅವರೇ ಇಲ್ಲಿ ಬರಲಿ ಎಂದಿದ್ದೆ. ಜೊತೆಗೆ ಬಿಜೆಪಿಯವರು ಎನ್ಆರ್ಸಿ, ಮುಸ್ಲಿಂ ಪರ್ಸನಲ್ ಲಾಗೆ ಕೈ ಹಾಕಲ್ಲ ಎಂದು ಭರವಸೆ ಕೊಡ್ತಾರಾ ಎಂದು ಪ್ರಶ್ನಿಸಿದ್ದೆ ಎಂದು ಇಬ್ರಾಹಿಂ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿ ಎಂ ಇಬ್ರಾಹಿಂ ವಿರುದ್ಧ ಕ್ರಮ ಕೈಗೊಳ್ಳೂವಂತೆ ಪಕ್ಷದಲ್ಲಿ ಒತ್ತಾಯ ಕೇಳಿಬಂದಿತ್ತು.
ಏನಿದು ಅಡ್- ಹ್ಯಾಕ್ :ತಾತ್ಕಾಲಿಕ ಮೀಟಿಂಗ್‌ಗಳು ಅಥವಾ ಒನ್-ಆಫ್ ಮೀಟಿಂಗ್‌ಗಳಾಗಿರುತ್ತವೆ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ವಿಷಯ ಅಥವಾ ಚರ್ಚೆಯ ವೇಳೆ, ಮಧ್ಯಂತರವಾಗಿ ನಡೆಯುವ ಸಭೆಗಳಾಗಿವೆ. ಅಡ್ - ಹಾಕ್ ಸಭೆಗಳು ಯಾವುದೇ ಸಿದ್ಧತೆ/ಯೋಜನೆ ಇಲ್ಲದೇ ನಡೆಯುವ ಸಭೆಗಳಾಗಿದ್ದು, ತುರ್ತು ಅಜೆಂಡಾ ಮತ್ತು ಸಭೆಯಲ್ಲೇ ತತಕ್ಷಣ ನಿರ್ಧಾರ ಕೈಗೊಳ್ಳಬಹುದಾಗಿದೆ. ಇದು ಸಭೆಯ ಉದ್ದೇಶದ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ:ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಡಿಕೆಶಿ ವಿರುದ್ಧದ ಸಿಬಿಐ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ, ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು