ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಈವರೆಗೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಪ್ರಭಾಕರ ರೆಡ್ಡಿಯನ್ನು ಘೋಷಿಸಿದ್ದರು. ಆದರೆ, ಕಾಂಗ್ರೆಸ್ನಲ್ಲಿ ಬಂಡಾಯ ಅಭ್ಯರ್ಥಿಯೆಂದೇ ಬಿಂಬಿತರಾಗಿದ್ದ ರಾಜಗೋಪಾಲರೆಡ್ಡಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಇದೀಗ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದು, ಖುದ್ದು ಹೆಚ್ಡಿಕೆ ಅವರೇ ರಾಜಗೋಪಾಲರೆಡ್ಡಿ ಅವರ ಹುಲಿಮಂಗಲದ ಮನೆಗೆ ಭೇಟಿ ನೀಡಿ ಇಂದು ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದಾರೆ. ಜೊತೆಗೆ ಪತ್ನಿ ಸುಷ್ಮಾ ಮತ್ತು ಮಗಳನ್ನು ಮಹಿಳಾ ಸಂಘಟಕಿಯಾಗಿ ಮುಂದಿನ ದಿನಗಳಲ್ಲಿ ಆಯ್ಕೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಡಿಕೆ, ರಾಜಗೋಪಾಲರೆಡ್ಡಿ ಅವರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂದು ಹಲವಾರು ವರ್ಷಗಳಿಂದ ಅವರ ಸಂಪೂರ್ಣ ಕುಟುಂಬ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಮಯವನ್ನು ಮೀಸಲಿಟ್ಟು ಶಕ್ತಿಯನ್ನು ತುಂಬಿದ್ರು. ಅಭ್ಯರ್ಥಿಯನ್ನು ನೇಮಕ ಮಾಡುವಾಗ ಅವರನ್ನು ಕಡೆಗಣಿಸಿದ್ದು, ಅವರ ಜೊತೆ ಮುಕ್ತವಾಗಿ ಚರ್ಚೆ ಮಾಡದೇ ತೀರ್ಮಾನ ಮಾಡಿರುವುದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಇದೆಲ್ಲವನ್ನು ಚರ್ಚೆ ಮಾಡಿ ನಾನೇ ಖುದ್ದು ಅವರಿಗೆ ದೂರವಾಣಿ ಕರೆ ಮುಖಾಂತರ ಮಾತನಾಡಿದೆ. 2 ದಿನಗಳ ಸಮಯ ತೆಗೆದುಕೊಂಡಿದ್ರು. ಬುಧವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿಂದೆ ಪ್ರಭಾಕರ ರೆಡ್ಡಿ ಕ್ಷೇತ್ರದಲ್ಲಿ ಹೆಚ್ಚು ಉತ್ಸಾಹದಿಂದ ಕಾಣಿಸಿಕೊಳ್ಳದೇ ಇದ್ದಿದ್ದರಿಂದ ಬದಲಾದ ಸನ್ನಿವೇಶದಲ್ಲಿ ರಾಜಗೋಪಾಲರೆಡ್ಡಿ ಹೆಸರನ್ನು ಘೋಷಿಸಲಾಗಿದೆ ಎಂದರು.
ಇದನ್ನೂ ಓದಿ :ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ, ರೈತ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ತೀನಿ: ಹೆಚ್ಡಿಕೆ