ಬೆಂಗಳೂರು : ಜೆಡಿಎಸ್ ಪಕ್ಷವನ್ನು ಮುಗಿಸುವುದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಉದ್ದೇಶವಾಗಿದೆ. ಹೀಗಾಗಿ ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ನಾಯಕರಿಂದ ಆಮಿಷವೊಡ್ಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದರು.
ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದರು. ದೇವೇಗೌಡರ ಬಗ್ಗೆ ಸಿಎಂ ಮಾತಾಡಿದ್ದಾರೆ. ಮಾತನಾಡುವವರು ಏನೇನು ಮಾಡಿದ್ದಾರೆ ಎನ್ನುವುದನ್ನು ನೋಡಿಕೊಂಡು ಬಂದಿದ್ದೇನೆ. ಜೆಡಿಎಸ್ ಮುಗಿಸಬೇಕು ಅನ್ನೋದೇ ಆ ಇಬ್ಬರು ನಾಯಕರ ಅಜೆಂಡಾ ಆಗಿದೆ. ಈಗಲೂ ಸಹ ಅವರು ಇವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂದರು.
ಕ್ಷೇತ್ರದ ಅಭಿವೃದ್ಧಿ ಕೆಲಸದ ವಿಚಾರವಾಗಿ ಹೋದರೆ ನಮ್ಮ ಶಾಸಕರನ್ನು ಕೂರಿಸಿಕೊಂಡು ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಬನ್ನಿ. ಏನ್ ಬೇಕೋ ಅದನ್ನು ಮಾಡಿಕೊಡುತ್ತೇವೆ ಎನ್ನುತ್ತಿದ್ದಾರೆ. ಎಷ್ಟು ಕೋಟಿ ಬೇಕೋ ಅಷ್ಟು ಕೊಡ್ತೀವಿ, ಪಕ್ಷಕ್ಕೆ ಬನ್ನಿ ಅಂತಾರೆ. ಯಾವ ಕಾರಣಕ್ಕೆ ಇದನ್ನು ಮಾಡುತ್ತಿದ್ದೀರಿ?. ವಿರೋಧ ಪಕ್ಷ ಉಳಿಸೋಕೆ ಮಾಡ್ತಿರೋದಾ? ಜೆಡಿಎಸ್ ಮುಗಿಸಬೇಕು ಅಂತಲೇ ಇವರು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ಹೆಚ್ಡಿಕೆ ದೂರಿದರು.
ಕ್ಷೇತ್ರ ಹಂಚಿಕೆ ಚರ್ಚೆ ಆಗಿಲ್ಲ :ಮುಂಬವರುವ ಲೋಕಸಭಾ ಚುನಾವಣೆಯಲ್ಲಿಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಂದೆ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶ ಮಾತ್ರ ಇದೆ. ಅದರ ಬಗ್ಗೆ ಚರ್ಚೆ ಆಗಿದೆ. ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚೆ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಗತ್ಯ ಬಿದ್ದರೆ ಸುಮಲತಾ ಭೇಟಿ ಆಗುತ್ತೇನೆ :ಮಂಡ್ಯ ಸಂಸದರಾದ ಸುಮಲತಾ ಅವರ ಬೆಂಬಲಿಗ ಸಚ್ಚಿದಾನಂದ ಅವರ ಭೇಟಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ಭೇಟಿ ಮಾಡುವ ಅವಶ್ಯಕತೆ ಬಂದರೆ ಸುಮಲತಾ ಅವರನ್ನು ಕೂಡಾ ಭೇಟಿ ಆಗುತ್ತೇನೆ. ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಸುಮಲತಾ ಬಿಜೆಪಿಯಲ್ಲಿ ಮುಂದುವರಿಯುವುದಾದರೆ ಮಿತ್ರಪಕ್ಷ ಬಿಜೆಪಿ ಪರವಾಗಿ ಅವರನ್ನು ಭೇಟಿ ಮಾಡುತ್ತೇನೆ. ನಾವೇನು ಇಂತಹ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿದ್ದೀವಾ?. ಇಂತಹವರಿಗೆ ತೊಂದ್ರೆ ಕೊಟ್ಟು ನಿಲ್ಲಬೇಕು ಅಂತಾನೂ ಇದ್ದೀವಾ? ಖಂಡಿತಾ ಇಲ್ಲ. ಈ ಬಗ್ಗೆ ಇನ್ನೂ ಚರ್ಚೆಯೇ ಆಗಿಲ್ಲ. ಇವೆಲ್ಲಾ ಪ್ರಾರಂಭಿಕ ಹಂತದಲ್ಲಿ ಇದೆ. ಬಿಜೆಪಿ- ಜೆಡಿಎಸ್ ನಾಯಕರೆಲ್ಲ ಕುಳಿತು ಸೌಹಾರ್ದಯುತವಾಗಿ ಕೆಲಸ ಮಾಡೋಕೆ ಎಲ್ಲರ ಜೊತೆಗೂ ಚರ್ಚೆ ನಡೆಸುತ್ತೇವೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ :ಈಗಿನ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ತರ ದರೋಡೆ ಮುಂದುವರಿಸುತ್ತಿದೆ: ಹೆಚ್ ಡಿ ಕುಮಾರಸ್ವಾಮಿ