ಬೆಂಗಳೂರು :ಕಾಂಗ್ರೆಸ್ ಕುಟಿಲತೆ, ಕಪಟತನದ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದೆ. ಕೈ ಕೊಡುವ ಚಾಳಿ ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್ ಜನ್ಮಕ್ಕೆ ಅಂಟಿದ ಆಜನ್ಮ ಜಾಡ್ಯ. ಒಳಗೊಂದು ಮುಖ, ಹೊರಗೊಂದು ಮುಖವುಳ್ಳ ಮುಖೇಡಿ ಪಕ್ಷವೇ ಕಾಂಗ್ರೆಸ್. ಅಂಥ ಕಾಂಗ್ರೆಸ್, ಚುನಾವಣೆ ಹೊತ್ತಿಗೆ ಸುಳ್ಳುಗಳ ಸರಮಾಲೆಯನ್ನೇ ಪೋಣಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕುಮಾರಸ್ವಾಮಿ ಟ್ವೀಟ್ ವಿವರ: ಪ್ರಧಾನಿಯಾಗಿದ್ದ ಕನ್ನಡದ ಹೆಮ್ಮೆಯ ಪುತ್ರನನ್ನು ಕೆಳಗೆಳೆದ ಕಿರಾತಕ ಪಕ್ಷ, ಜಾತ್ಯತೀತತೆ ಎನ್ನುತ್ತಲೇ ಜಾತಿಗಳ ನಡುವೆ ಕಿಚ್ಚಿಟ್ಟ ಸೋಗಲಾಡಿ ಪಕ್ಷ, ಅಹಿಂದ ಎನ್ನುತ್ತಲೇ ಬಿಜೆಪಿ ಹಿಂದೆಬಿದ್ದು ಬೇಳೆ ಬೇಯಿಸಿಕೊಳ್ಳುತ್ತಿರುವ ಪಕ್ಷ, ಅಂಥ ಕಳಂಕಿತ ಪಕ್ಷ ಜಾತ್ಯತೀತ ಜನತಾದಳದ ಜಾತ್ಯತೀತತೆ ಬಗ್ಗೆ ಕೀರಲು ದನಿಯಲ್ಲಿ ಕಿರುಚುತ್ತಿದೆ. ಇಡೀ ದೇಶದ ಉದ್ದಗಲಕ್ಕೂ ಜಾತ್ಯತೀತ ಪಕ್ಷಗಳ ಮಾರಣಹೋಮ ನಡೆಸಿ, ಈಗ ಅಳಿವು ಉಳಿವಿಗಾಗಿ ಅದೇ ಪ್ರಾದೇಶಿಕ ಪಕ್ಷಗಳ ಬಾಲವಾಗಿ ಉಸಿರಾಡುತ್ತಿದೆ ಕಾಂಗ್ರೆಸ್. ಇನ್ನೂ ಹಳೆಯ ಅಮಲಿನಲ್ಲಿಯೇ ತೇಲುತ್ತಿದೆ ಆ ಪಕ್ಷಕ್ಕೆ ವರ್ತಮಾನದ ವರ್ತನೆಯ ಅರಿವೇ ಇಲ್ಲ.
ಈ ಕಾಂಗ್ರೆಸ್ ಮಹಾತ್ಮ ಗಾಂಧೀಜಿ ಅವರ ಕಾಲದ ಕಾಂಗ್ರೆಸ್ ಅಲ್ಲ, ಅಧಿಕಾರಕ್ಕಾಗಿ ಎಲ್ಲ ಅಡ್ಡದಾರಿ ಹಿಡಿದ ಪಕ್ಷ ಈ ಕಾಂಗ್ರೆಸ್, ಕಾಲಚಕ್ರಕ್ಕೆ ಸಿಲುಕಿ ಕೊರಗುತ್ತಾ ನೀತಿಗೆಟ್ಟ, ಲಜ್ಜೆಗೆಟ್ಟ, ಮತಿಗೆಟ್ಟ ಕಾಂಗ್ರೆಸ್, ಕರ್ನಾಟಕದಲ್ಲಿ ಮತಗೇಡಿ ಬಿಜೆಪಿಯ ಬಾಲಂಗೋಚಿ ಆಗಿರುವುದು ಸುಳ್ಳಾ ಎಂದು ಪ್ರಶ್ನಿಸಿದ್ದಾರೆ. ಸರ್ಕಾರಗಳ ಸುಪಾರಿ ಕಿಲ್ಲರ್ ಅವರನ್ನೇ ಪೋಷಿಸಿ ಪೊರೆಯುತ್ತಿರುವ, ಇನ್ನೊಬ್ಬರ ಬಗ್ಗೆ ಹೊಟ್ಟೆಕಿಚ್ಚು ಪಡುವ ಕೀಳುತನ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಅಂಟಿದ ಬಾಲಗ್ರಹ ಪೀಡೆ.
ಅಧಿಕೃತ ಪ್ರತಿಪಕ್ಷವಾಗಿ ಹಗರಣಗಳ ಆಡಂಬೋಲವಾದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಯಕಶ್ಚಿತ್ ಒಂದು ದಾಖಲೆಯನ್ನೂ ಬಿಡುಗಡೆ ಮಾಡಲು ಯೋಗ್ಯತೆ ಇಲ್ಲದ ಪಕ್ಷ ಕಾಂಗ್ರೆಸ್. ಭ್ರಷ್ಟ ರಾಜ್ಯ ಬಿಜೆಪಿ ವಿರುದ್ಧ ಸರಣಿ ದಾಖಲೆಗಳನ್ನೇ ಇಟ್ಟ ಜೆಡಿಎಸ್, ಬಿಜೆಪಿ ಅಧಿಕಾರಸ್ಥರ ಸರಣಿ ಜೈಲು ಪರೇಡ್ ಗೆ ಕಾರಣವಾಗಿದ್ದು ಇತಿಹಾಸ. ಆಗ ಕಾಂಗ್ರೆಸ್ ಎಲ್ಲಿತ್ತು? ಅಂದು ಬಿಜೆಪಿ ಜೊತೆ ಹೊಂದಾಣಿಕೆ ಆಗಿದ್ದು ಸುಳ್ಳೇ? ಕದ್ದು, ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ? ಕಳ್ಳಬೆಕ್ಕಿನ ಕಥೆ ಬೇರೆ ಬಿಡಿಸಿ ಹೇಳಬೇಕೆ?.