ಕರ್ನಾಟಕ

karnataka

ETV Bharat / state

ಕನ್ನಡಿಗರ ಅಸ್ಮಿತೆಯ ಸಂಕೇತವಾಗಿರುವ ಜೆಡಿಎಸ್ ಪಕ್ಷ ಗೆಲ್ಲಿಸಿಕೊಡಿ: ಬಸವಕಲ್ಯಾಣ ಜನತೆಗೆ ಹೆಚ್​ಡಿಡಿ ಮನವಿ - ಪತ್ರ ಬರೆದು ಜನರಲ್ಲಿ ಮನವಿ ಮಾಡಿದ ದೇವೇಗೌಡ

ಜೆಡಿಎಸ್ ವರಿಷ್ಠ ಹೆಚ್​.ಡಿ. ದೇವೇಗೌಡ ಅವರು ಪತ್ರ ಬರೆಯುವ ಮೂಲಕ ಬಸವಕಲ್ಯಾಣ ಕ್ಷೇತ್ರದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.

ಹೆಚ್​.ಡಿ.ದೇವೇಗೌಡ
HD Devegowda

By

Published : Apr 11, 2021, 2:18 PM IST

ಬೆಂಗಳೂರು:ಕನ್ನಡಿಗರ ಸ್ವಾಭಿಮಾನ ಮತ್ತು ಆಸ್ಮಿತೆಯ ಸಂಕೇತವಾಗಿರುವ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕೆಂಬ ಹಠ ಮತ್ತು ಛಲದೊಂದಿಗೆ ನಾನಿನ್ನೂ ಬದುಕಿದ್ದೇನೆ. ಹೀಗಾಗಿ ಬಸವಕಲ್ಯಾಣ ಕ್ಷೇತ್ರದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ ಎಂದು ಜೆಡಿಎಸ್ ವರಿಷ್ಠ ಹೆಚ್​.ಡಿ. ದೇವೇಗೌಡರು ಪತ್ರ ಮುಖೇನ ಜನತೆಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಕ್ಷೇತ್ರದ ಮತದಾರರಿಗೆ ಬಹಿರಂಗ ಪತ್ರ ಬರೆದಿರುವ ದೇವೇಗೌಡರು, ಭಾವನಾತ್ಮಕವಾಗಿ ಮತಯಾಚನೆ ಮಾಡಿದ್ದಾರೆ. ನಾನು ಈಗ ನಡೆಯುತ್ತಿರುವ ಬಸವ ಕಲ್ಯಾಣದ ಉಪ ಚುನಾವಣೆಯ 88 ವರ್ಷದ ವೃದ್ಧನಾಗಿ ನಿಮ್ಮ ಮಧ್ಯೆ ಬಂದು ನಿಮ್ಮೊಂದಿಗೆ ಸಂವಾದಿಸಲು ಸಾಧ್ಯವಾಗುತ್ತಿಲ್ಲ. ಇಂದಿನ ಯುವ ಪೀಳಿಗೆಗೆ ನಾನು ಅಧಿಕಾರದಲ್ಲಿದ್ದಾಗ ಈ ಭಾಗದ ಅಭಿವೃದ್ಧಿಗೆ ಮಾಡಿದ ಕಾರ್ಯಗಳ ಪರಿಚಯವಿಲ್ಲ. ಒಂದು ಪ್ರಾದೇಶಿಕ ಪಕ್ಷವು ಎರಡು ರಾಷ್ಟ್ರೀಯ ಪಕ್ಷಗಳ ಎದುರು ಬದುಕುಳಿದು ನಾವು ನಂಬಿದ ತತ್ವಗಳಿಗಾಗಿ ಹೋರಾಟ ಮಾಡುತ್ತಿರುವುದೇ ಒಂದು ದೊಡ್ಡ ಸಾಹಸ‌ ಎಂದು ವಿವರಿಸಿದ್ದಾರೆ.

ಈ ಇಳಿವಯಸ್ಸಿನಲ್ಲಿ ನನ್ನ ಬದುಕಿನ ಕೊನೆಯ ಘಟ್ಟದಲ್ಲಿ ನಾನು ನಿಮ್ಮಲ್ಲಿ ವಿನಮ್ರಪೂರ್ವಕವಾಗಿ ಅರಿಕೆ ಮಾಡಿಕೊಳ್ಳುತ್ತೇನೆ. ಕನ್ನಡಿಗರ ಸ್ವಾಭಿಮಾನ ಮತ್ತು ಆಸ್ಮಿತೆಯ ಸಂಕೇತವಾಗಿರುವ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕೆಂಬ ಹಠ ಮತ್ತು ಛಲದೊಂದಿಗೆ ನಾನಿನ್ನೂ ಬದುಕಿದ್ದೇನೆ. ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಇದು ನಮ್ಮೆಲ್ಲರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ತಾವು ದಯವಿಟ್ಟು ನಮ್ಮ ಪಕ್ಷದ ಅಭ್ಯರ್ಥಿ ಸೈಯದ್ ಎಸ್ರಾಬ್ ಅಲಿ ಖಾದ್ರಿಯನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಓದಿ: ಅರುಣ್ ಸಿಂಗ್‌ಗೆ ಭಾರತೀಯ ಇತಿಹಾಸ ಗೊತ್ತಿಲ್ಲ: ಸತೀಶ್​ ಜಾರಕಿಹೊಳಿ‌

ಪತ್ರದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಮೀಸಲಾತಿಗಾಗಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸವಿವರವಾಗಿ ಬರೆದಿದ್ದಾರೆ. ಆಗ ನಾನು ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯಂತೆ ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮಾದಾರ ಚನ್ನಯ್ಯ ಮುಂತಾದ ಸಮುದಾಯಗಳಿಗೆ ಸಿಗುವಂತಹ ಸಾಮಾಜಿಕ ನ್ಯಾಯ ನೀತಿಯನ್ನು ರಾಜಕೀಯ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಿಗೂ ಅನ್ವಯಿವಂತಹ ಮೀಸಲಾತಿ ಸೂತ್ರದ ರಚನೆಗೆ ಮುಂದಾಗಿದ್ದೆ. ನಾನು ಜಾರಿಗೆ ತಂದ ಮೀಸಲಾತಿ ಸೂತ್ರವೇ ಈಗಲೂ ಜಾರಿಯಲ್ಲಿದೆ ಎಂಬುದು ಹೆಮ್ಮೆಯ ವಿಚಾರ ಎಂದು ದೇವೇಗೌಡರು ವಿವರಿಸಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ನನಗಿದ್ದ ಅಧಿಕಾರವನ್ನು ಉಪಯೋಗಿಸಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆಂದೇ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸಿದ್ದೆ. ಕೂಡಲ ಸಂಗಮದ ವಿಷಯದಲ್ಲೂ ಅದನ್ನು ಉಳಿಸಿ ಅಭಿವೃದ್ಧಿಗೊಳಿಸಿದ ತೀರ್ಮಾನ ತೆಗೆದುಕೊಳ್ಳಲು ನಾನು ಪಟ್ಟ ಪ್ರಯತ್ನ ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿರಬಹುದು. ನಾನು ರಾಜ್ಯದ ಸಂಪನ್ಮೂಲದಿಂದಲೇ 126 ಕೋಟಿ ರೂ.ಗಳನ್ನು ಇರಿಸಿ ಕೂಡಲ ಸಂಗಮವನ್ನು ಉಳಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದೇನೆ ಎಂದು ಜೆಡಿಎಸ್​ ವರಿಷ್ಠರು ತಿಳಿಸಿದ್ದಾರೆ.

ABOUT THE AUTHOR

...view details