ಕರ್ನಾಟಕ

karnataka

ETV Bharat / state

JDS alliance with BJP: ಮೈತ್ರಿ ಬಗ್ಗೆ ಬಿಜೆಪಿ ಸಂಪರ್ಕಿಸಿರುವುದು ಸತ್ಯ, ಸೀಟು ಹಂಚಿಕೆ ಬಗ್ಗೆ ಹೆಚ್​ಡಿಕೆ ತೀರ್ಮಾನ.. ದೇವೇಗೌಡ ಘೋಷಣೆ

JDS alliance with BJP in Lok Sabha Election: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್​ ಸಭೆಯಲ್ಲಿ ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಕುರಿತಂತೆ ಮಾತನಾಡಿದ್ದಾರೆ.

HD Devegowda talks about alliance with BJP in next Lok Sabha Election
ಮೈತ್ರಿ ಬಗ್ಗೆ ಬಿಜೆಪಿ ಸಂಪರ್ಕಿಸಿರುವುದು ಸತ್ಯ, ಸೀಟು ಹಂಚಿಕೆ ಬಗ್ಗೆ ಹೆಚ್​ಡಿಕೆ ತೀರ್ಮಾನ: ದೇವೇಗೌಡ ಘೋಷಣೆ

By ETV Bharat Karnataka Team

Published : Sep 10, 2023, 3:55 PM IST

Updated : Sep 10, 2023, 4:35 PM IST

ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಸ್ಪರ್ಧೆ ಮಾಡುವ ಕುರಿತು ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅಧಿಕೃತವಾಗಿ ಪ್ರಕಟಿಸಿದ್ದು, 40 ವರ್ಷದಿಂದ ಪಕ್ಷಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, ಈಗ ಪ್ರಾದೇಶಿಕ ಪಕ್ಷವಾದ ನಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್​​ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡ, ಮೈತ್ರಿ ವಿಚಾರ ಕುರಿತು ಕದ್ದುಮುಚ್ಚಿ ಯಾವುದೇ ಚಟುವಟಿಕೆ ನಡೆಸಿಲ್ಲ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಎಲ್ಲಾ ಕ್ಷೇತ್ರಗಳಿಗೂ ವೀಲ್ ಚೇರ್ ಮೇಲೆ ಹೋಗುತ್ತೇನೆ, ವೀಲ್ ಚೇರ್ ಮೇಲೆ ಹೋಗುವ ಶಕ್ತಿ ಇದೆ. ನನಗೆ ಯಾರ ಮೇಲೂ ದ್ವೇಷವಿಲ್ಲ, ದ್ವೇಷದ ಬಗ್ಗೆ ಲವಲೇಷವೂ ಆಸಕ್ತಿ ಇಲ್ಲ. ಈ ರಾಜ್ಯದಲ್ಲಿ ಜನ ಕೊಡುವ ತೀರ್ಪು ಪ್ರಾದೇಶಿಕ ಪಕ್ಷ ಉಳಿಸುವ ತೀರ್ಪು ಎಂದು ರಾಜ್ಯದ ಜನತೆಯ ಮುಂದೆ ಕೈಮುಗಿದು ಬೇಡುತ್ತೇನೆ ಎಂದರು.

ಜೆಡಿಎಸ್​​ ಕಾರ್ಯಕರ್ತರ ಸಮಾವೇಶದ ಉದ್ಘಾಟನೆ

40 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆಂದ ಹೆಚ್​ಡಿಡಿ:ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರದ ಚರ್ಚೆ ಕಳೆದ 13 ದಿನಗಳಿಂದ ನಡೆಯುತ್ತಿದೆ ನಾನು ದೆಹಲಿಯಲ್ಲಿ ಬಿಜೆಪಿಯ ನಾಯಕರುನ್ನು ಅನೈತಿಕವಾಗಿ ಸಂಪರ್ಕ ಮಾಡಿದ್ದೆ ಎಂದಾದರೆ ನೈತಿಕತೆ ಯಾರಿಗಿದೆ ಎಂದು ವಿಶ್ಲೇಷಣೆ ಮಾಡಲ್ಲ. ಈ ರಾಜ್ಯದ ನಾಯಕರಿಗೆ ಯಾರ್ಯಾರಿಗೆ ನೈತಿಕತೆ ಇದೆ, ಇಲ್ಲ ಎಂದು‌ ನಾನು ವಿಶ್ಲೇಷಣೆ ಮಾಡುವುದಿಲ್ಲ. ನಾನು ವ್ಯಕ್ತಿಗತ ನಿಂದನೆ ಮಾಡಲ್ಲ. 90ನೇ ವಯಸ್ಸಿನಲ್ಲಿ ನಾನು ಅದನ್ನು ಬೆಳೆಸೋದಿಲ್ಲ. ಕುಮಾರಸ್ವಾಮಿ ಆರೋಗ್ಯ ಹದಗೆಟ್ಟಿತು, ಏನು ಮಾಡಬೇಕೆಂಬ ಯೋಚನೆ ಮಾಡಿ ಇಂದು ಸಭೆ ಕರೆಯುವ ತೀರ್ಮಾನ ಮಾಡಿದ್ದೆವು. ಇಲ್ಲಿ ಬಂದಿರುವ ಕಾರ್ಯಕರ್ತರಿಗೆ ಮಾತ್ರ ಈ ಪಕ್ಷ ಉಳಿಸುವ ಶಕ್ತಿ ಇದೆ. ದೇವೇಗೌಡರು ದೆಹಲಿಗೆ ಹೋಗಿ ಯಾರನ್ನೋ ಭೇಟಿ ಮಾಡಿದ್ದರು ಎಂದು ಚರ್ಚೆ ಮಾಡಿದ್ದರು. ಹೌದು.. ಈ ಪಕ್ಷ ಉಳಿಸಬೇಕಿದೆ, 40 ವರ್ಷ ಈ ಪಕ್ಷಕ್ಕಾಗಿ ದುಡಿದಿದ್ದೇನೆ. ಕುಮಾರಸ್ವಾಮಿಯು ಬಿಜೆಪಿ ಜೊತೆ ಹೋದಾಗಲೂ ನಾನು ಪಕ್ಷ ಉಳಿಸಿದ್ದೇನೆ ಎಂದು ಬಿಜೆಪಿ ಜೊತೆಗಿನ ಮೈತ್ರಿ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಪಕ್ಷ ಉಳಿಸಲು ಮೈತ್ರಿ ಅನಿವಾರ್ಯ‌:ಬಿಜೆಪಿಯವರು ನನ್ನ ಸಂಪರ್ಕ ಮಾಡಿದ್ದು ಸತ್ಯ, ಒಂದು ಪ್ರಾದೇಶಿಕ ಪಕ್ಷವನ್ನು 40 ವರ್ಷ ನಡೆಸಿಕೊಂಡು ಬಂದಿದ್ದೇನೆ, ಕುಮಾರಸ್ವಾಮಿ ಅಮಿತ್ ಶಾ ಜೊತೆಗೆ ಸಭೆಗೆ ಹೋದಾಗ ನಿಮ್ಮ‌ ತಂದೆ ಹಠವಾದಿ ಜೀವನ ಪರ್ಯಂತ ನಿಮ್ಮನ್ನು ಸಿಎಂ ಮಾಡುತ್ತೇವೆ ಎಂದು ಮೋದಿಯವರು ಹೇಳಿದರೂ ಕುಮಾರಸ್ವಾಮಿ ನಮ್ಮ ತಂದೆಗೆ ಆರೋಗ್ಯ ಸರಿ ಇಲ್ಲ, ಹಿಂದೆ ಮಾಡಿದ ನೋವು ಈಗ ಮಾಡಲ್ಲ ಎಂದಿದ್ದರು. ಅಧಿಕಾರ ಸಿಗದಿದ್ದರೂ ಪರವಾಗಿಲ್ಲ, ತಂದೆಯವರಿಗೆ ನೋವು ಕೊಡಲ್ಲವೆಂದಿದ್ದರು. ಆದರೆ ಈಗ ಪಕ್ಷ ಉಳಿಸಲು ಮೈತ್ರಿ ಅನಿವಾರ್ಯವಾಗಿದೆ ಎಂದು ದೇವೇಗೌಡ ಹೇಳಿದರು.

ಸ್ಥಾನ ಹಂಚಿಕೆ ಬಗ್ಗೆ ಕುಮಾರಸ್ವಾಮಿ ತೀರ್ಮಾನ:ಬಿಜೆಪಿಯವರು ಸಂಪರ್ಕ ಮಾಡಿದ್ದು ಸತ್ಯವಾದರೂ ಇನ್ನೂ ಸ್ಥಾನ ಹಂಚಿಕೆ ಕುರಿತು ಮಾತುಕತೆ ನಡೆದಿಲ್ಲ. ನಾವು ಯಾವ ಸೀಟು ಕೂಡ ನಾವು ಕೇಳಿಲ್ಲ, ಹಾಸನ, ಮಂಡ್ಯ, ರಾಮನಗರ, ಕೋಲಾರ, ತುಮಕೂರಿನಲ್ಲಿ ಬಿಜೆಪಿ ವೋಟ್ ಇಲ್ಲವೇ? ಹಾಗೆಂದ ಮಾತ್ರಕ್ಕೆ ಜೆಡಿಎಸ್‌ಗೆ ವೋಟ್ ಇಲ್ಲ ಎಂದು ಕೂಡ ಬಿಜೆಪಿ ಕೂಡ ಭಾವಿಸಬಾರದು. ಈ ಮಾತನ್ನು ಕೂಡ ನಾನು ಹೇಳಿದ್ದೇನೆ. ವಿಜಯಪುರ, ಬೀದರ್ ನಮ್ಮ ಪಕ್ಷ ಬೆಂಬಲ ಕೊಟ್ಟರೆ ಮಾತ್ರ ಗೆಲ್ಲುತ್ತಿರಾ ಎಂದು ಕೂಡ ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೂಡ ನಮ್ಮ ಮತಗಳು ಇದೆ, ಕುಮಾರಸ್ವಾಮಿ ಅಂತಿಮವಾಗಿ ಚರ್ಚೆ ಮಾಡಿ ಎಷ್ಟು ಕ್ಷೇತ್ರ ಹಂಚಿಕೆ ಎಂದು ತೀರ್ಮಾನ ಮಾಡುತ್ತಾರೆ ಎಂದರು.

ಜೆಡಿಎಸ್​​ ಪಕ್ಷದ ಕಾರ್ಯಕರ್ತರ ಸಮಾವೇಶ

ಪಿಎಂ ಸ್ಥಾನ ಬೇಡ ಅಂದವನು ನಾನು:ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಆ ಭಾಗ್ಯ, ಈ ಭಾಗ್ಯ, ಇಂದಿರಾ ಕ್ಯಾಂಟಿನ್ ಅಂತ ಮಾಡಿತ್ತು. ಕುಮಾರಸ್ವಾಮಿ ಸಿಎಂ ಆದ ಬಳಿಕ ಆ ಯೋಜನೆಗಳಿಗೆ ಹಣ ನೀಡಿದ್ದಲ್ಲದೇ ರೈತರ ಸಾಲಮನ್ನಾ ಮಾಡಿದ್ದರು. 28 ಸಾವಿರ ಕೋಟಿ ಸಾಲಮನ್ನಾ ಮಾಡಿದರು, ಹಿಂದೂಸ್ತಾನದಲ್ಲಿ ಈ ರೀತಿಯ ಸಿಎಂ ಯಾರಿದ್ದಾರೆ ಹೇಳಿ ಎಂದು ಪುತ್ರನ ಆಡಳಿತವನ್ನು ದೇವೇಗೌಡ ಸಮರ್ಥಿಸಿಕೊಂಡರು. ದೇವೇಗೌಡರನ್ನು ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದೀರಾ, ದೇವೇಗೌಡರನ್ನು ಮುಗಿಸುತ್ತೀರಾ ಎಂದ ದೇವೇಗೌಡ, ಇಂದು ಯಾವ ರಾಜಕೀಯ ಪಕ್ಷಗಳಿಗೆ ಸಿದ್ಧಾಂತ, ತತ್ವ ಇದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಬೆಂಬಲ ಕೊಡುತ್ತೇನೆ ಎಂದಾಗ ನನಗೆ ಪಿಎಂ ಸ್ಥಾನ ಬೇಡ ಮನೆಗೆ ಹೋಗ್ತೀನಿ ಅಂದವನು ನಾನು. ಅಂತಹ ನನ್ನ ನೈತಿಕತೆ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಣ್ಣೀರು ಹಾಕಿದ ಹೆಚ್​​ಡಿಡಿ:ನನಗೆ ನೋವಿದೆ, ಈ ಪಕ್ಷ ಉಳಿಸಬೇಕಿದೆ. ಕುಮಾರಸ್ವಾಮಿಗೆ ಆರೋಗ್ಯ ಸರಿಯಿಲ್ಲ ಎನ್ನುತ್ತಾ ಭಾವುಕರಾದ ದೇವೇಗೌಡರು, ಈ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಸಬೇಕು ಎಂದು ಮನವಿ ಮಾಡುತ್ತೇನೆ. ಕಾವೇರಿ, ಮಹಾದಾಯಿ, ಕೃಷ್ಣ ಯಾವುದೇ ವಿಚಾರ ಇರಲಿ ನನ್ನ ನಾಡಿನ ವಿಷಯ ಬಿಟ್ಟು ರಾಜಕಾರಣ ಮಾಡಲ್ಲ ಎಂದು ಕಣ್ಣೀರು ಹಾಕಿದರು.

ನಾನು‌ 2018ರ ಮಾರ್ಚ್ 13ರಂದು ಪಾರ್ಲಿಮೆಂಟ್​​ಗೆ ನಿಲ್ಲಲ್ಲ ಅಂದಿದ್ದೇನೆ. ಲೋಕಸಭೆಯಲ್ಲಿ ದೇವೇಗೌಡರಿಗೆ 3 ನಿಮಿಷಕ್ಕಿಂತ ಹೆಚ್ಚು ಅವಕಾಶ ಕೊಡಬಾರದು‌ ಅಂತ‌ ಅಂದುಕೊಂಡಿದ್ದರು. ಆಗಲೇ ಸಂಸತ್​​ಗೆ ಬರಬಾರದು ಅಂತ ತೀರ್ಮಾನ ಮಾಡಿದ್ದೆ. ಆಗ ಅರ್ಧಗಂಟೆ ಮಾತನಾಡುತ್ತೇನೆ ಅಂತ ಕಣ್ಣೀರು ಹಾಕಿ‌ ಸ್ಪೀಕರ್​​ಗೆ ಕೇಳಿಕೊಂಡೆ. ಅದಕ್ಕೆ ಸ್ಪೀಕರ್ ನಾನು‌ ಸುಮ್ಮನೆ ಗಂಟೆ ಹೊಡಿತಿನಿ ನೀವು ಮಾತಾಡುತ್ತಾ ಇರಿ ಅಂದರು. ಸೋನಿಯಾ ಗಾಂಧಿ, ಮುಲಾಯಂ‌ ಪಕ್ಕದಲ್ಲಿ ನಾನಿದ್ದೆ. ಆಗ ನೀವು ಚುನಾವಣೆಗೆ ನಿಲ್ಲಲೇ ಬೇಕು ಅಂತ ಹಲವರು ಹೇಳಿದ್ದರು. ಅದಕ್ಕಾಗಿ ಮತ್ತೆ ಚುನಾವಣೆಗೆ ನಿಂತೆ, ಆದರೆ ಏನಾಯಿತು ಎಂದು ಎಲ್ಲರಿಗೂ ಗೊತ್ತು ಎಂದರು.

ಮಮತಾ ಬ್ಯಾನರ್ಜಿ ವಿರುದ್ಧ ಕಾಂಗ್ರೆಸ್, ‌ಕಮ್ಯೂನಿಷ್ಟ್ ಒಟ್ಟಾಗಿ ಹೋರಾಟ ಮಾಡುತ್ತಿದೆ. ಇದಕ್ಕೆ ಯಾವ ನೀತಿಯಿದೆ. ಈ ದೇಶದಲ್ಲಿ ಕರುಣಾನಿಧಿ ‌ಮನೆಗೆ ನೀವು ಹೋಗ್ತಿರಿ‌ ಇದ್ಯಾವ‌ ರಾಜಕಾರಣ ಎಂದು ಎಂದು ಬಿಜೆಪಿ- ಜೆಡಿಎಸ್ ಮೈತ್ರಿ ಟೀಕಿಸುತ್ತಿರುವವರ ವಿರುದ್ಧ ದೇವೇಗೌಡ ವಾಗ್ದಾಳಿ ನಡೆಸಿದರು.

ನನ್ನ ತಾಯಂದಿರೇ ಏಳಿ.. ಎದ್ದೇಳಿ.. ಲೋಕಸಭೆಯಲ್ಲಿ ಮಹಿಳಾ‌ ಮೀಸಲು ಬಿಲ್ ತಂದಿದ್ದೆ. ಅದರ ಲಾಭ ಪಡೆಯುತ್ತಿರುವುದು‌ ಕಾಂಗ್ರೆಸ್ ಹಾಗೂ ಬಿಜೆಪಿ. ಈ ಚುನಾವಣೆಯಲ್ಲಿ ಜನತಾದಳ ಉಳಿಯುತ್ತದೆ, ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಮತ್ತೆ ಮತ್ತೆ ಗೆದ್ದು ನಿಲ್ಲಲಿದೆ, ಈ ಕಾರ್ಯಕ್ರಮಕ್ಕೆ ಬಂದ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ದೇವೇಗೌಡ ಹೇಳಿದರು.

Last Updated : Sep 10, 2023, 4:35 PM IST

ABOUT THE AUTHOR

...view details