ಕರ್ನಾಟಕ

karnataka

ETV Bharat / state

ಪಕ್ಷ ಸಂಘಟನೆ ಮಾಡದವರಿಗೆ ಬಿ ಫಾರಂ ಇಲ್ಲ, ಮಹಿಳೆಯರಿಗೆ ಆದ್ಯತೆ: ಹೆಚ್​ಡಿಡಿ

2023ರ ವಿಧಾನಸಭೆ ಚುನಾವಣೆಗೆ ಬೆಂಗಳೂರಿನ 28 ಕ್ಷೇತ್ರಗಳಿಗೂ ಜೆಡಿಎಸ್ ಸ್ಪರ್ಧಿಸಲಿದೆ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ತಿಳಿಸಿದ್ದಾರೆ. ಜೊತೆಗೆ ಕನಿಷ್ಠ 9 ಸ್ಥಾನಗಳನ್ನು ಮಹಿಳೆಯರಿಗೆ ನೀಡುವುದಾಗಿ ಘೋಷಿಸಿದ್ದಾರೆ.

hd devegowda speech in  jds women conference
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಭಾಷಣ

By

Published : Sep 2, 2021, 5:35 PM IST

ಬೆಂಗಳೂರು: ಪಕ್ಷ ಸಂಘಟನೆ ಮಾಡದವರಿಗೆ ಯಾವುದೇ ಶಿಫಾರಸು ಮಾಡಿದರೂ ಬಿ ಫಾರಂ ಕೊಡಲ್ಲ. ಪಕ್ಷದ ಸಂಘಟನೆ ಮಾಡುವವರಿಗೆ ಆದ್ಯತೆ ನೀಡುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಖಡಕ್ ಆಗಿ ಹೇಳಿದ್ದಾರೆ.

ಜೆಡಿಎಸ್​ನ ಬೆಂಗಳೂರು ಮಹಿಳಾ ಘಟಕದಿಂದ ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದ್ರು. ಯಾರು ಪಕ್ಷಕ್ಕೆ ನಿಷ್ಠೆಯಿಂದ ಇರುತ್ತಾರೋ ಅಂತಹವರನ್ನು ಗುರುತಿಸುವ ಕೆಲಸ ಮಾಡಬೇಕು. ಸೋತರೂ ಗೆದ್ದರೂ ಪಕ್ಷದಲ್ಲಿ ಇರುತ್ತೇನೆ ಎನ್ನುವವರಿಗೆ ಟಿಕೆಟ್ ಕೊಡಬೇಕು. ಕನಿಷ್ಠ ಸಂಖ್ಯೆಯ ಮಂದಿಯನ್ನಾದರೂ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ಬಿ ಫಾರಂ ಸಿಗುವುದು ಕಷ್ಟ ಎಂದು ಪಕ್ಷದ ಮುಖಂಡರಿಗೆ ಎಚ್ಚರಿಸಿದರು.

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಭಾಷಣ

ಮುಸ್ಲಿಂರನ್ನು ಕೈ ಬಿಡಲ್ಲ:

ನಾನು ಕುಳಿತುಕೊಳ್ಳುವವನಲ್ಲ, ಹೋರಾಟ ಮಾಡುವವನು. ಮುಸ್ಲಿಂರನ್ನು ಕೈ ಬಿಡಲ್ಲ, ಅವರನ್ನು ಕಡೆಗಣಿಸಬಾರದು. ಕೇಂದ್ರಕ್ಕೂ ಹೇಳಿದ್ದೇನೆ. ಶಕ್ತಿ ಮೀರಿ ಕೆಲಸ ಮಾಡೋಣ. ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಸರ್ಕಾರ ನಮ್ಮನ್ನು ಅಲಕ್ಷ್ಯ ಮಾಡಿದರೆ ಹೋರಾಟದ ಮೂಲಕ ಎಚ್ಚರಿಕೆ ನೀಡೋಣ ಎಂದು ಹೇಳಿದರು.

ಬೆಂಗಳೂರಿನ 28 ಕ್ಷೇತ್ರಗಳಿಗೂ ಜೆಡಿಎಸ್ ಅಭ್ಯರ್ಥಿಗಳು :

2023ರ ವಿಧಾನಸಭೆ ಚುನಾವಣೆಗೆ ಬೆಂಗಳೂರಲ್ಲಿ ಕನಿಷ್ಠ 9 ಸ್ಥಾನಗಳನ್ನು ಮಹಿಳೆಯರಿಗೆ ನೀಡುತ್ತೇನೆ. ಇನ್ನೂ 28 ಕ್ಷೇತ್ರದಲ್ಲಿಯೂ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಹಾಕುತ್ತೇವೆ. ಅವರು ಸೋಲಲಿ, ಗೆಲ್ಲಲಿ, ಒಂದು ವೇಳೆ ಸೋತರೆ ಅವರು ಮುಂದೆ ಬೆಳೆಯುತ್ತಾರೆ. ಹಾಗಾಗಿ, ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕುತ್ತೇನೆ ಎಂದರು.

ವಾಗ್ದಾಳಿ :

ದೇವೇಗೌಡರು ಹೋದರೆ ಈ ಪಕ್ಷ ಹೋಗುತ್ತದೆ ಅಂತ ಅಣುಕು ಮಾಡುತ್ತಿದ್ದಾರೆ‌. ಕಾಂಗ್ರೆಸ್​ನವರು ಏನು ಮಾತನಾಡಿದ್ದಾರೆ? ದೇವೇಗೌಡರು ಏನು ಮಾಡುತ್ತಿದ್ದಾರೆ? ಎನ್ನುವುದನ್ನು ಮುಂದೆ ಹೇಳುತ್ತೇನೆ. ಈಗ ಮಾತನಾಡಲು ಹೋಗಲ್ಲ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಈ ಪಕ್ಷ ಉಳಿಸುವ ಶಕ್ತಿ ಕಾರ್ಯಕರ್ತರಿಗಿದೆ. ಇಲ್ಲಿ ದೇವೇಗೌಡರಿಂದ ಅಥವಾ ಕುಮಾರಸ್ವಾಮಿಯಿಂದ ಪಕ್ಷ ಉಳಿಯೋದಲ್ಲ. ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಆ ಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ನಾವು ಕೊಡಬೇಕು ಅಷ್ಟೇ. ನಮ್ಮ ಪಕ್ಷದ ಬಗ್ಗೆ ತುಂಬ ಲಘುವಾಗಿ ಮಾತಾನಾಡುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬರುವವರೆಗೂ ಕೆಲಸ ಮಾಡುತ್ತೇನೆ ಎಂದು ಮಳೆಯ ನಡುವೆಯೂ ದೇವೇಗೌಡರು ಅಬ್ಬರಿಸಿದ್ರು.

ಗರಂ ಆದ ದೊಡ್ಡಗೌಡರು :ಭಾಷಣದ ಮಧ್ಯೆಯೂ ಊಟಕ್ಕೆ ಹೋಗುತ್ತಿದ್ದ ಕಾರ್ಯಕರ್ತರನ್ನು ಕಂಡು ಗೌಡರು ಗರಂ ಆದರು. ನಮಗೆ ಊಟ ತಿಂದು ಹೋಗುವ ಕಾರ್ಯಕರ್ತರು ಬೇಡ. ಕನಿಷ್ಠ 150 ಮಂದಿ ಕಾರ್ಯಕರ್ತರು ಇದ್ದರೂ ಸಾಕು. ಅವರು ಊಟಕ್ಕೆ ಬಂದಿದ್ದರೆ ಹೊರಗೆ ಕಳುಹಿಸಿ ಎಂದು ಸಿಡಿಮಿಡಿಗೊಂಡರು.

ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಬೇಕು:

ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು‌. ಪಕ್ಷಕ್ಕೆ ನಾವು ಹೇಗೆ ಸಂಘಟನೆ ದೃಷ್ಟಿಯಿಂದ ಹೋರಾಟ ಮಾಡ್ಬೇಕು ಅಂತ ಯೋಚನೆ ಮಾಡಿ. ಬೆಂಗಳೂರು ಮಹಿಳಾ ಸಮಾವೇಶ ಮಾಡಲು ಸೂಚನೆ ಕೊಟ್ಟಿದ್ದೆ‌. ಒಂದು ಕಾಲದಲ್ಲಿ ನನ್ನ ಜೊತೆ ಕೆಲಸ ಮಾಡಿದ ಹಿರಿಯ ಮುಖಂಡರು, ನಮ್ಮಲ್ಲಿ ಹೆಣ್ಣು ಮಕ್ಕಳಿದ್ದಾರೆ. ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ. ಯಾರು ನಿಲ್ಲುತ್ತೇನೆ ಅಂತಾರೋ ಅವರನ್ನು ಮಾತ್ರ ನಿಲ್ಲಿಸೋದು ಎಂದ್ರು.

ಮೂರನೇ ಒಂದು ಭಾಗದಷ್ಟು ಶಕ್ತಿ ಗಳಿಸಿಕೊಳ್ಳಬೇಕು:

ಕೈ ಮುಗಿದು ಹೇಳ್ತೆನೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ. ವಾಜಪೇಯಿ ಘೋಷಣೆ ಮಾಡಿದ್ದಾರೆ. ವಾಜಪೇಯಿ ಆರು ವರ್ಷ ಆಳಿದ್ರು, ಮನಮೋಹನ್ ಸಿಂಗ್ 10 ವರ್ಷ ಆಳಿದ್ರು. ನರೇಂದ್ರ ಮೋದಿ ಏನು ಮಾಡ್ತಿದ್ದಾರೆ ಅಂತ ಗಮನಿಸಿದ್ದೇನೆ. 12 ಮಹಿಳೆಯರನ್ನ ಸಚಿವರನ್ನಾಗಿ ಮಾಡಿದ್ದಾರೆ‌. ಮೂರನೇ ಒಂದು ಭಾಗದಷ್ಟು ಶಕ್ತಿ ಗಳಿಸಿಕೊಳ್ಳಬೇಕು ಎಂದರು.

ಮಳೆಯ ಮಧ್ಯೆ ಭಾಷಣ ಮುಂದುವರಿಸಿದ ದೇವೇಗೌಡರು, ಮಳೆ ಬಂದರೂ ಬರಲಿ ಧೃತಿಗೆಡಬೇಡಿ. ಎರಡು ನಿಮಿಷ‌ ನೆಂದರೂ ಪರ್ವಾಗಿಲ್ಲ. ಆರಾಮಾಗಿ ಇಲ್ಲಿ ನಿಂತಿದ್ದೇನೆ. ತಲೆಯಲ್ಲಿ ಕೂದಲಿಲ್ಲ, ಆದರೂ ಧೈರ್ಯವಾಗಿ ನಿಂತಿದ್ದೇನೆ. ನಾನು ಕೂಡ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೆ. ನಂತರ ರಾಜ್ಯದ ಮುಖ್ಯಮಂತ್ರಿಯಾದೆ. ರಾಜ್ಯದಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಿದ್ದೇವೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲೂ ಮೀಸಲಾತಿ ನೀಡುತ್ತೇವೆ ಎಂದು ಘೋಷಿಸಿದರು.

ABOUT THE AUTHOR

...view details