ಬೆಂಗಳೂರು : ನನಗೂ ಆರ್ಎಸ್ಎಸ್ಗೂ ಏನು ಸಂಬಂಧ ಇದೆ? ಆರ್‌ಎಸ್‌ಎಸ್ ಬಗ್ಗೆ ನನಗೆ ಯಾವ ಗಂಧ, ಗಾಳಿಯೂ ಗೊತ್ತಿಲ್ಲ. ಸುಮ್ಮನೆ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ತಿರುಗೇಟು ನೀಡಿದರು.
ಸಿ.ಟಿ. ರವಿ ಹೇಳಿಕೆಗೆ ಹೆಚ್ಡಿಡಿ ಕೆಂಡಾಮಂಡಲ.. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇಲ್ಲವೇ?. ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಅಪ್ಪಟ ಸುಳ್ಳು ಎಂದು ಸಿ ಟಿ ರವಿ ಹೇಳಿಕೆಯನ್ನು ತಳ್ಳಿ ಹಾಕಿದರು.
ಆರ್‌ಎಸ್‌ಎಸ್ ಬಗ್ಗೆಗಂಧ,ಗಾಳಿ ಗೊತ್ತಿಲ್ಲ :ಎಮರ್ಜೆನ್ಸಿ ಸಮಯದಲ್ಲಿ ಎಲ್ ಕೆ ಅಡ್ವಾಣಿ ಅವರು ಬಂದಾಗ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು, ನಾನೇ ಅನುಮತಿ ನೀಡಿದ್ದೆ. ನನ್ನ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆದಿತ್ತು.
ನಾನು ಆ ಸಭೆಯಲ್ಲೇ ಹೇಳಿದ್ದೆ, ಸಭೆಯನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದಿದ್ದೆ. ನಾವು ತುರ್ತುಪರಿಸ್ಥಿತಿಗೆ ಬೆಂಬಲಿಸುತ್ತೇವೆ ಎಂದು ಹೇಳಿ ಅನೇಕರು ಬರೆದುಕೊಟ್ಟರು. ನನಗೂ ಆರ್ಎಸ್ಎಸ್ಗೂ ಏನು ಸಂಬಂಧ ಇದೆ? ಆರ್‌ಎಸ್‌ಎಸ್ ಬಗ್ಗೆ ನನಗೆ ಗಂಧ,ಗಾಳಿ ಗೊತ್ತಿಲ್ಲ. ಸುಮ್ಮನೆ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಸಿ.ಟಿ. ರವಿ ಅವರಿಗೆ ತಿವಿದರು.
ಕಾಂಗ್ರೆಸ್‌ಗೆ ಟಾಂಗ್ : ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 25 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈ ಮನುಷ್ಯ ಹೇಗೆ ಮಾಡುತ್ತಾನೆ ಎಂದು ಅನ್ನಿಸುತ್ತಿತ್ತು. ವಿಧಿಯಾಟ ಬೇರೆಯಾಗಿತ್ತು. ಬಿಜೆಪಿ 106, ಕಾಂಗ್ರೆಸ್ 78 ಜೆಡಿಎಸ್ 37 ಬಂತು. ನಿಚ್ಚಳ ಬಹುಮತ ಕಳೆದ ಬಾರಿ ಯಾರಿಗೂ ಬರಲಿಲ್ಲ. ನಾವು ಮುಖ್ಯಮಂತ್ರಿ ಸ್ಥಾನ ಪಡೆದರೆ ಆಭಾಸ ಆಗುತ್ತದೆ.
ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ಮೈತ್ರಿ ವೇಳೆ ಹೇಳಿದ್ದೆ. ಖರ್ಗೆಯವರು ಕೂಡ ಅದಕ್ಕೆ ಒಪ್ಪಿದ್ದರು. ಸೋನಿಯಾ ಗಾಂಧಿ ಅವರನ್ನು ಒಪ್ಪಿಸುತ್ತೇನೆ ಎಂದು ಗುಲಾಮ್ ನಬಿ ಆಜಾದ್ ಕೂಡ ಹೇಳಿದ್ದರೂ. ಆದರೆ, ಮತ್ತೆ ಅವರೇ ಬಂದು ಕುಮಾರಸ್ವಾಮಿ ಸಿಎಂ ಆಗಬೇಕೆಂದು ನಮ್ಮನ್ನು ಒಪ್ಪಿಸಿದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಜಾತಿ ನೋಡಿ ಬೆಳೆಸಲಿಲ್ಲ : ಹಾನಗಲ್ ಹಾಗೂ ಸಿಂದಗಿಯಲ್ಲಿ ಮುಸ್ಲಿಂ ಅಭರ್ಥಿಗಳನ್ನು ಹಾಕಿದ್ದೇವೆ. ಜಾತಿ ನೋಡಿ ನಾನು ಬೆಳೆಸಲಿಲ್ಲ, ಯಾರನ್ನೆಲ್ಲ ಬೆಳೆಸಿದ್ದೇನೆ ಎಂದು ಹೇಳಲ್ಲ. ಬಸವಕಲ್ಯಾಣದಲ್ಲಿ 50 ಸಾವಿರ ಮುಸ್ಲಿಂ ಮತಗಳಿವೆ. ಹೀಗಾಗಿ, ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ ಅದಕ್ಕೂ ಮುನ್ನ ಖೂಬಾಗೆ ಟಿಕೆಟ್ ಆಫರ್ ಮಾಡಿದ್ದೆ. ಆದರೆ, ಖೂಬಾ ಪಕ್ಷೇತರ ಅಭ್ಯರ್ಥಿ ಆಗುತ್ತೇನೆ ಎಂದಿದ್ದರು.
ಸಿಂಧಗಿಯಲ್ಲಿ ಮೊದಲು ಮನುಗೂಳಿಗೆ ರಾಜಕೀಯವಾಗಿ ಅವಕಾಶ ಕೊಟ್ಟಿದ್ದೆ ನಾನು. ಆದರೆ, ಇವತ್ತು ಅವರ ಮಗ ಕಾಂಗ್ರೆಸ್‌ಗೆ ಹೋಗಿದ್ದಾರೆ. ಮನೆ ಮಗನಂತೆ ಬೆಳೆಸಿ ಕೊಂಡು ಬಂದೆ. ಸಂಕಷ್ಟದಲ್ಲೂ ಮಂತ್ರಿ ಮಾಡಿದೆವು. ಮನಗೂಳಿ ಕಾಲವಾದ ನಂತರ ಅವರ ಮಗನನ್ನು ಕಾಂಗ್ರೆಸ್‌ನವರು ಕರೆದುಕೊಂಡು ಹೋದರು. ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ? ಎಂದು ಪ್ರಶ್ನಿಸಿದರು.
ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ :ಬಿಜೆಪಿ ಗೆಲ್ಲಿಸಲು ನಾವು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಮುಸ್ಲಿಮರನ್ನು ನೀವು (ಕಾಂಗ್ರೆಸ್) ಗುತ್ತಿಗೆ ಪಡೆದಿಲ್ಲ. ನಾನು ಬೆಳೆಸಿದ್ದ ಮುಸ್ಲಿಂ ಮುಖಂಡ, ಸಿದ್ದರಾಮಯ್ಯ ಬಲಗೈಗೆ ಶಕ್ತಿ ಕೊಟ್ಟವರು. ಬಲಗೈ ಭಂಟ ಎನ್ನಲ್ಲ ಎಂದು ಪರೋಕ್ಷವಾಗಿ ಜಮೀರ್ ಅಹಮದ್ ವಿಷಯ ಪ್ರಸ್ತಾಪಿಸಿದರು.
ಕಾಂಗ್ರೆಸ್ ಸ್ಥಿತಿ :ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರ್ತಾ ಇದೆ ಅಂತಾ ಗೊತ್ತಿದೆ. ನೆಹರೂ ಅವರ ನಂತರ ಕಾಲದಿಂದ ಕಾಲಕ್ಕೆ ಯಾವ ಯಾವ ರಾಜ್ಯದಲ್ಲಿ ಎಲ್ಲಿಗೆ ಬಂದಿದೆ ಅಂತಾ ಎಲ್ಲರಿಗೂ ಗೊತ್ತಿದೆ. ನನ್ನನ್ನು ಕೆಣಕಲು ಹೋಗಬೇಡಿ. ಕೆಣಕಿದರೆ ಸರಿ ಇರಲ್ಲ ಎಂದು ದೇವೇಗೌಡರು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.