ಬೆಂಗಳೂರು :ಯಾವುದೇ ಪಕ್ಷಗಳ ಜೊತೆ ಚುನಾವಣಾ ಪೂರ್ವ ಮೈತ್ರಿ ಇಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಬಿಜೆಪಿ ಜೊತೆಗೆ ಯಾವುದೇ ರೀತಿ ಒಳ ಒಪ್ಪಂದವಿಲ್ಲ. ಮುಂದಿನ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ನಮ್ಮ ಪಕ್ಷದಿಂದ ಅಭ್ಯರ್ಥಿ ಹಾಕುತ್ತೇವೆ ಎಂದು ಹೇಳಿದರು.
ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನ್ನು ಉಳಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ಜನತಾ ಜಲಧಾರೆ ಮೂಲಕ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ವಾಸ್ತಾಂಶ ತಿಳಿಸಲು ಮಾರ್ಚ್ 20ರಂದು ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತೇವೆ. ಅಲ್ಲಿ ನಮ್ಮ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸುತ್ತೇವೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಸಬೇಕಿದೆ. ಹಾಗಾಗಿ, ಎರಡೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೇವೆ. ಒಬ್ಬರೋ ಇಬ್ಬರೋ ಪಕ್ಷ ಬಿಟ್ಟರೆ ನಾವು ಹೆದರುವುದಿಲ್ಲ. ಜನರ ಮುಂದೆ ಹೋಗುವುದೇ ನಮ್ಮ ನಿರ್ಣಯ ಎಂದು ತಿಳಿಸಿದರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಲ್ಕು ದಿಕ್ಕಿನಲ್ಲಿ ಅಧಿಕಾರಕ್ಕೆ ತರಲು ಹಂಬಲಿಸುತ್ತಿದ್ದಾರೆ. ಅವರ ಕಾರ್ಯವನ್ನು ನಾವು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳಬೇಕು. ಮನಮೋಹನ್ ಸಿಂಗ್ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯನ್ನು ಹಿಮ್ಮುಖ ಮಾಡಲು ಸಾಧ್ಯವಾಗಿಲ್ಲ ಎಂಬುದು ವಾಸ್ತವಾಂಶ, ಪಕ್ಷ ಉಳಿಸಿಕೊಳ್ಳಬೇಕು ಎನ್ನುವ ಬದ್ಧತೆ ಯಾರಿಗಿದೆಯೋ ಅಂಥವರನ್ನು ಸಂಘಟನೆ ಮಾಡಿ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಅವಧಿಗೂ ಮುನ್ನ ಚುನಾವಣೆ ಸುಲಭವಲ್ಲ :ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣಾ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಯಾಕೆ ಅಗಬಾರದು? ನಾವು ಚುನಾವಣಾ ಎದುರಿಸಲು ಸಿದ್ಧರಿದ್ದೇವೆ. ಆದರೆ, ಅವಧಿಗೂ ಮುನ್ನ ಚುನಾವಣೆ ಅಷ್ಟು ಸುಲಭವಲ್ಲ. ಈಗಾಗಲೇ ಯಡಿಯೂರಪ್ಪ ಸಹ ಇದೇ ಮಾತನ್ನು ಹೇಳಿದ್ದಾರೆ. ಚುನಾವಣೆಯಲ್ಲಿ ಯಶಸ್ವಿಯಾಗುವುದು ಸುಲಭವಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ :ನೀರು ತರುವುದಾಗಿ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿದರು. ನೀರಾವರಿ ಯೋಜನೆಯನ್ನೇ ಕೈಗೆತ್ತಿಕೊಂಡಿದ್ದ ನನ್ನ ಕೈಯಲ್ಲಿ ಮಾಡಲು ಆಗಲಿಲ್ಲ. ಬೇರೆ ಬೇರೆ ಸರ್ಕಾರಗಳು ಏನು ಮಾಡಿವೆ ಎಂಬ ಚರ್ಚೆ ಈಗ ಬೇಡ, ಬಿಜೆಪಿ, ಜೆಡಿಎಸ್ ಏನು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದರು. ನೀವೇ ಉಳಿಸಿಕೊಡಬೇಕು ಎಂದು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಕಾವೇರಿ ಕೊಳ್ಳದಲ್ಲಿ ನೀರು ತಂದುಬಿಟ್ಟಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಒಬ್ಬ ಕನ್ನಡಿಗ ಪ್ರಧಾನಿಯಾಗಿದ್ದನ್ನು ಸಹಿಸಲು ಅವರಿಗೆ ಆಗಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.