ಬೆಂಗಳೂರು:ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.
ಆರ್‌ಸಿಇಪಿ ಒಪ್ಪಂದಿಂದಾಗಿ ದೇಶದ ರೈತ ಸಮುದಾಯಕ್ಕೆ ಸಂಕಷ್ಟ ಎದುರಾಗಲಿದ್ದು, ಇದರಿಂದ ದೊಡ್ಡಮಟ್ಟದ ಸಮಸ್ಯೆಗಳು ಉಂಟಾಗಲಿವೆ. ಯಾವುದೇ ಕಾರಣಕ್ಕೂ ಈ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಗೌಡರು ಕೋರಿದ್ದಾರೆ. ಆರ್‌ಸಿಇಪಿ ಒಪ್ಪಂದದಿಂದ ಗ್ರಾಮೀಣ ಭಾಗದ ಆರ್ಥಿಕತೆಯ ಮೇಲೆ ಉಂಟಾಗಲಿರುವ ಪರಿಣಾಮಗಳ ಕುರಿತು ಪತ್ರದಲ್ಲಿ ತಿಳಿಸಿದ್ದಾರೆ.
ನೀತಿ ಆಯೋಗದ ಅಂದಾಜಿನ ಪ್ರಕಾರ 2033ರ ವೇಳಗೆ ದೇಶದ ಒಟ್ಟಾರೆ ಹಾಲಿನ ಉತ್ಪಾದನೆಯು ಪ್ರಸ್ತುತ ಇರುವ 180 ದಶಲಕ್ಷ ಟನ್‌ನಿಂದ 330 ದಶಲಕ್ಷ ಟನ್‌ಗೆ ಏರಿಕೆಯಾಗಲಿದೆ. ಬೇಡಿಕೆ 292 ದಶಲಕ್ಷ ಟನ್‌ಗಳಷ್ಟಿರಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕದಲ್ಲಿ 14 ಸಾವಿರ ಹಾಲು ಉತ್ಪಾದಕರ ಸಂಘಗಗಳಿದ್ದು, 24 ಲಕ್ಷ ಹಾಲು ಉತ್ಪಾದಕರಿದ್ದಾರೆ. ನಿತ್ಯ 84 ಲಕ್ಷ ಕೆಜಿ ಹಾಲು ಉತ್ಪಾದನೆಯಾಗುತ್ತಿದ್ದು, 65 ಹಾಲಿನ ಉಪ ಉತ್ಪನ್ನಗಳನ್ನು ಮಾಡಲಾಗುತ್ತಿದೆ. ನಂದಿನಿ ಬ್ರ್ಯಾಂಡ್‌ನಡಿ ಕೋಟ್ಯಂತರ ಗ್ರಾಹಕರ ಮನೆ ಸೇರುತ್ತಿದೆ ಎಂದು ಬರೆದಿದ್ದಾರೆ.
ಗುಜರಾತ್ ಕೂಡಾ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಅನೇಕ ರೈತ ಕುಟುಂಬಗಳು ಹೈನುಗಾರಿಕೆಯ ಮೇಲೆ ಅವಲಂಬಿತವಾಗಿವೆ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.