ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರು ಭೀಷ್ಮಾಚಾರ್ಯ ಇದ್ದಂತೆ. ಅವರಿಗೆ ಸಾವು ಅನ್ನೋದು ಅವರು ಬಯಸಿದಾಗಲೇ ಬರುತ್ತದೆಯೇ ಹೊರತು, ಯಾರೋ ಏನೋ ಹೇಳಿದಾಗ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ನ್ನು ಅಧಿಕಾರಕ್ಕೆ ತರಲೇಬೇಕೆಂದು ದೇವೇಗೌಡರು ಶಪಥ ಮಾಡಿದ್ದಾರೆ. ಭೀಷ್ಮಾಚಾರ್ಯರ ಗುಣ ಅವರಿಗೆ ಇದೆ. ಅವರು ಬಯಸಿದಾಗ ಸಾವು ಬರುತ್ತದೆ. ಭಗವಂತ ಅವರಿಗೆ ಇನ್ನೂ ಶಕ್ತಿ ಕೊಟ್ಟಿದ್ದಾನೆ. ನಾನು ಅವರ ಭಾವನೆಗಳನ್ನು ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ಅವರ ಆಯಸ್ಸಿನ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಚರ್ಚೆ ಮಾಡಿರುವ ವ್ಯಕ್ತಿಗಳ ಬಯಕೆ ಈಡೇರುವುದಿಲ್ಲ ಎಂದು ಟಾಂಗ್ ಕೊಟ್ಟರು.
ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಟೀಂನಲ್ಲಿ ಈ ಬಗ್ಗೆ ಚರ್ಚೆ ಆಗಿರುತ್ತದೆ. ದೇವೇಗೌಡರು ಇನ್ನೆಷ್ಟು ವರ್ಷ ಇರುತ್ತಾರೆ. ಅವರ ಕಾಲ ಮುಗಿಯಿತು ಅಂತ ಆಂತರಿಕವಾಗಿ ಮಾತನಾಡಿಕೊಂಡಿರುತ್ತಾರೆ. ಹಾಗಾಗಿ, ರಾಜಣ್ಣನವರು ವೇದಿಕೆ ಮೇಲೆ ಅದನ್ನೇ ಬಾಯಿತಪ್ಪಿ ಹೇಳಿದ್ದಾರೆ ಅಷ್ಟೇ ಎಂದು ದೂರಿದರು.