ಕರ್ನಾಟಕ

karnataka

ETV Bharat / state

ಸಿಎಂ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ ಹೆಚ್ ​ಡಿ ದೇವೇಗೌಡ: ಕಾರಣ? - ಸಬ್​ಇನ್ಸ್​ಪೆಕ್ಟರ್ ಬಾಪುಗೌಡ ಪಾಟೀಲ್ ವರ್ಗಾವಣೆಗೆ ಸಿಎಂ ಆದೇಶ

ಯಾದಗಿರಿ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಸಬ್​ಇನ್ಸ್​ಪೆಕ್ಟರ್ ಬಾಪುಗೌಡ ಪಾಟೀಲ್​ರನ್ನು ವರ್ಗಾವಣೆಗೊಳಿಸಲು ಸಿಎಂ ಆದೇಶ ನೀಡಿದ್ದು, ಇದಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಸಿಎಂ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ್ದಾರೆ.

HD Devegowda

By

Published : Nov 6, 2019, 11:29 PM IST

ಬೆಂಗಳೂರು:ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಸಬ್​ಇನ್ಸ್​ಪೆಕ್ಟರ್ ಬಾಪುಗೌಡ ಪಾಟೀಲ್​ರನ್ನು ವರ್ಗಾವಣೆಗೊಳಿಸುವ ಕ್ರಮಕ್ಕೆ ಸಿಎಂ ಮುಂದಾಗಿದ್ದಾರೆ. ಹೀಗಾಗಿ ಸಿಎಂ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು

ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ನಾನು ಬಂದು ಪ್ರತಿಭಟನೆ ಮಾಡಿದ್ದೇನೆಂದು ಹಿಗ್ಗೋದು, ಆ ಕ್ಷೇತ್ರದಲ್ಲಿ ರಾಜಕೀಯ ತಿಕ್ಕಾಟ ಮಾಡಿಕೊಳ್ಳೋದು ಬೇಡ. ಕಾರ್ಯಕರ್ತರು ಸೂಕ್ಷ್ಮವಾಗಿ ವರ್ತಿಸಬೇಕು. ಏನೋ ಸಾಧಿಸಿದ್ದೇವೆ ಎನ್ನುವ ಭಾವನೆ ಕಾರ್ಯಕರ್ತರಿಗೆ ಬೇಡ. ಸಿಎಂ ಯಡಿಯೂರಪ್ಪ ಅವರು ಕ್ರಮ ತೆಗೆದುಕೊಂಡಿರುವುದು ಸಂತೋಷ. ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರು ಶಾಂತಿ ಕಾಪಾಡಿಕೊಂಡು ಹೋಗಬೇಕು ಎಂದರು.

ನನ್ನ ರಾಜಕೀಯ ಜೀವನದಲ್ಲಿ ಇಂತಹ ನೂರಾರು ಪ್ರಕರಣಗಳನ್ನು ನೋಡಿದ್ದೇನೆ. ಇಂತಹ ಘಟನೆಯಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನಾನು ಯಡಿಯೂರಪ್ಪನವರಿಗೆ ಬೆದರಿಕೆ ಹಾಕಿಲ್ಲ. ಈ ವಿಷಯವನ್ನು ಸಿಎಂ ಗಮನಕ್ಕೆ ತಂದಿದ್ದೆ ಅಷ್ಟೇ ಎಂದು ಹೆಚ್​ಡಿಡಿ ಹೇಳಿದ್ರು.

ಇನ್ನು, ಉಪ ಚುನಾವಣೆ ನಂತರ ಬಿಜೆಪಿಗೆ ಬೆಂಬಲ ನೀಡುವ ವಿಚಾರದಲ್ಲಿ ಜಾಣ್ಮೆಯ ಉತ್ತರ ನೀಡಿದ ದೇವೇಗೌಡರು, ಉಪ ಚುನಾವಣೆಯಲ್ಲಿ ಬಿಜೆಪಿ ಸೋತರೆ ಬೆಂಬಲ ಕೊಡ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವತ್ತಿನ ಸನ್ನಿವೇಶದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಏನು ನಿರ್ಧಾರ ಮಾಡುತ್ತವೆ ಎಂಬುದನ್ನು ಹೇಳುವುದಕ್ಕೆ ಆಗುತ್ತಾ? ಇಂತಹ ಕಾಲ್ಪನಿಕ ಪ್ರಶ್ನೆಗಳಿಗೆ ಯಾರಾದರೂ ಉತ್ತರ ಕೊಡೋಕೆ ಸಾಧ್ಯನಾ? ಎಂದು ಪ್ರಶ್ನಿಸಿದರು.

ಸಾರ್ವತ್ರಿಕ ಚುನಾವಣೆ ಯಾವಾಗ ಆಗುತ್ತದೆಯೋ ಗೊತ್ತಿಲ್ಲ. ನಾನು ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲವೆಂದು ಈಗಾಗಲೇ ಹೇಳಿದ್ದೇನೆ. ಹೀಗಿರುವಾಗ ಯಡಿಯೂರಪ್ಪ ಪರ, ಸಿದ್ದರಾಮಯ್ಯ ವಿರುದ್ಧ ಅಂತ ಮಾತಾಡೋದು ಸರಿಯಲ್ಲ. ಮಹಾರಾಷ್ಟ್ರದಲ್ಲಿ ಈಗ ಏನಾಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಎರಡು ಪಕ್ಷಗಳ ಜೊತೆ ಮಾತನಾಡುವ ಅವಶ್ಯಕತೆ ನಮಗಿಲ್ಲ ಎಂದು ಜೆಡಿಎಸ್​ ವರಿಷ್ಠರು ಮಾರ್ಮಿಕವಾಗಿ ನುಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಮಗೆ ಶತ್ರು ಅಲ್ಲ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ. ಆಯಾ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯವಾಗಿ ಮಾತನಾಡಿರುತ್ತೇವೆ ಅಷ್ಟೇ. ಕಾಲ ಕಾಲಕ್ಕೆ ಏನೇನು ಆಗಬೇಕು ಅದು ಆಗುತ್ತದೆ ಎಂದರು.

ಧರಣಿ ನಿರ್ಧಾರ ಕೈಬಿಟ್ಟ ಗೌಡರು :
ಗುರುಮಠಕಲ್​ನಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ವಿಚಾರಕ್ಕೆ ಸಿಎಂ ನಿವಾಸದ ಎದುರು ನ.15 ರಂದು ಧರಣಿ ನಡೆಸುವುದಾಗಿ ಹೇಳಿದ್ದ ದೇವೇಗೌಡರು ಇದೀಗ ಧರಣಿ ಕೈ ಬಿಟ್ಟಿದ್ದಾರೆ. ಸಬ್​ಇನ್ಸ್​ಪೆಕ್ಟರ್ ವಿರುದ್ಧ ಕ್ರಮ ತೆಗೆದುಕೊಂಡಿದ್ದಕ್ಕೆ ಯಡಿಯೂರಪ್ಪ ಬಗ್ಗೆ ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿ, ಅಂಭಿನಂದನೆ ಸಹ ಸಲ್ಲಿಸಿದ್ದಾರೆ.

ABOUT THE AUTHOR

...view details