ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ನಾಲ್ವರು ಶಾಸಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ಬೆಂಗಳೂರಿನ ನಾಲ್ಕು ಕ್ಷೇತ್ರಗಳ ಮುಖಂಡರ ಸಭೆ ಕರೆದಿದ್ದಾರೆ.
ಹೊಸ ತಂತ್ರ ರೂಪಿಸಲು ಸಭೆ ಕರೆದ ದೇವೇಗೌಡರು! - undefined
ಜೆಡಿಎಸ್ ನ ಕಚೇರಿ ಜೆಪಿ ಭವನದಲ್ಲಿ ಜುಲೈ 27 ಮತ್ತು 28 ರಂದು ದೊಡ್ಡಗೌಡರು ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ಕರೆಯಾದಿದ್ದಾರೆ.
ಒಂದು ವೇಳೆ ಉಪ ಚುನಾವಣೆ ಎದುರಾದರೆ ನಾಲ್ಕು ಕ್ಷೇತ್ರಗಳಿಗೆ ಪರ್ಯಾಯ ನಾಯಕರ ಆಯ್ಕೆ ಹಾಗೂ ಚುನಾವಣೆ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿರುವ ಗೌಡರು, ಹೊಸ ತಂತ್ರ ರೂಪಿಸಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಈ ಕುರಿತು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜುಲೈ 27 ಮತ್ತು 28 ರಂದು ಸಭೆ ಕರೆದಿದ್ದಾರೆ. ಜುಲೈ 27 ರಂದು ಬೆಳಗ್ಗೆ 11 ಗಂಟೆಗೆ ರಾಜರಾಜೇಶ್ವರಿನಗರ ಕ್ಷೇತ್ರ, ಮಧ್ಯಾಹ್ನ ಕೆ.ಆರ್.ಪುರ ಕ್ಷೇತ್ರದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ನಡೆಯಲಿದೆ. ಜುಲೈ 28 ರಂದು ಮಹಾಲಕ್ಷ್ಮಿ ಲೇಔಟ್, ಮಧ್ಯಾಹ್ನ ಯಶವಂತಪುರ ಕ್ಷೇತ್ರಗಳ ಮುಖಂಡರು, ಪದಾಧಿಕಾರಿಗಳ ಜೊತೆ ಹೆಚ್.ಡಿ.ದೇವೇಗೌಡರು ಸಭೆ ನಡೆಸಲಿದ್ದಾರೆ.
ಈಗಾಗಲೇ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಗೋಪಾಲಯ್ಯ, ಆರ್, ಆರ್ ನಗರದ ಕಾಂಗ್ರೆಸ್ ಶಾಸಕ ಮುನಿರತ್ನ, ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದು ವೇಳೆ ರಾಜೀನಾಮೆ ಅಂಗೀಕಾರವಾದರೆ ಉಪ ಚುನಾವಣೆ ಬರಲಿದೆ. ಹೀಗಾಗಿ, ಪರ್ಯಾಯ ನಾಯಕರನ್ನು ಆಯ್ಕೆ ಮಾಡಲು ಗೌಡರು ಮುಂದಾಗಿದ್ದಾರೆ.