ಕರ್ನಾಟಕ

karnataka

By

Published : Dec 26, 2020, 2:36 PM IST

Updated : Dec 26, 2020, 5:16 PM IST

ETV Bharat / state

ಜೆಡಿಎಸ್​ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ದೇವೇಗೌಡ ಗುಡುಗು

ಜೆಡಿಎಸ್‌ ಪಕ್ಷವನ್ನು ಯಾರೂ ಅಲುಗಾಡಿಸಲು, ಅಳಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಮಾಮೂಲಿ. ನಾನು ಇರುವಷ್ಟು ದಿನ ಮಾತ್ರ ಅಲ್ಲ, ನಾನು ಹೋದ ಮೇಲೂ ಈ ಪಕ್ಷ ಉಳಿಯಲಿದೆ - ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ

HD Deve Gowda
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ

ಬೆಂಗಳೂರು: ಕಳೆದ ಮೂರು ತಿಂಗಳಿಂದ ಜೆಡಿಎಸ್ ಬಗ್ಗೆ ಏನೇನೋ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಇದು ಒಂದು ರೀತಿಯ ಮನರಂಜನೆಯಾಗಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ.

ಜೆಡಿಎಸ್​ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ದೇವೇಗೌಡ

ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇರುವಷ್ಟು ದಿನ ಮಾತ್ರ ಅಲ್ಲ, ನಾನು ಹೋದ ಮೇಲೂ ಈ ಪಕ್ಷ ಉಳಿಯಲಿದೆ. ಅದಕ್ಕಾಗಿ ನಾನು ಹೋರಾಟ ಮಾಡುತ್ತೇನೆ ಎಂದರು.

ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ರಾಜಕಾರಣಿಗಳು ಏನೇನೂ ಮಾತಾಡ್ತಾರೋ ಅದನ್ನು ಕ್ರೋಢೀಕರಿಸಿ ನಿಮ್ಮ (ಮಾಧ್ಯಮದವರು) ಕರ್ತವ್ಯ ಮಾಡಿದ್ದೀರಿ. ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಎಷ್ಟು ಕಷ್ಟ ಅನ್ನೋದು ಮುಖ್ಯಸ್ಥರಿಗೆ ಗೊತ್ತಿರುತ್ತದೆ.

ಕರ್ನಾಟಕದಲ್ಲಿ ಜೆಡಿಎಸ್ ಆಟಕ್ಕಿಲ್ಲ, ಲೆಕ್ಕಕ್ಕಿಲ್ಲ. ಪಕ್ಷ ಉಳಿಯುತ್ತದೆಯೋ ಹೋಗುತ್ತದೆಯೋ? ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕುಮಾರಸ್ವಾಮಿ, ರೇವಣ್ಣ ಕಾರಣನಾ? ಎಂದು ಪ್ರಶ್ನಿಸಿದ ಅವರು, 1989 ರಲ್ಲಿ ನನ್ನನ್ನು ಎಲ್ಲರೂ ಹೊರ ಹಾಕಿದರು. ಏಕಾಂಕಿಯಾಗಿದ್ದೆ. ಯಾರ ಹೆಸರನ್ನೂ ಹೇಳುವುದಕ್ಕೆ ಆಗುವುದಿಲ್ಲ. ಮತ್ತೆ ವಾಪಸ್ ನನ್ನ ಬಳಿ ಬಂದರು. ಯಾರಾದರೂ ನನಗೆ ಹತ್ತು ರೂಪಾಯಿ ಕೊಟ್ಟಿದ್ದಾರಾ? ಈಗ ಕೆಲವರು ಬದುಕಿದ್ದಾರೆ. ಅವರಿಗೆ ಹೇಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಒಬ್ಬ ಕನ್ನಡಿಗ ಪ್ರಧಾನಿ ಆಗುವ ಮಟ್ಟವೂ ಬಂತು. ನಾನು ಪ್ರಧಾನಿ ಆಕಾಂಕ್ಷಿಯಾಗಿರಲಿಲ್ಲ. ಅದು ವಿಧಿಯಾಟ. ನಂತರ ನನ್ನನ್ನು ಬಿಟ್ಟು ಸರ್ಕಾರ ಕೂಡ ಮಾಡಿದ್ರು. ಪ್ರಾದೇಶಿಕ ಪಕ್ಷ ತನ್ನದೇ ಶಕ್ತಿಯಿಂದ ಆಡಳಿತ ನಡೆಸುವ ಶಕ್ತಿ ಬಂದ ಮೇಲೂ ಯಾಕೆ? ಇದು. ಈ ತಪ್ಪು ನಮ್ಮ ನಾಯಕರೇ ಹೊತ್ತುಕೊಳ್ಳಬೇಕಾ?. ಜನರ ಮೇಲೆ ಆಪಾದನೆ ಮಾಡುವುದಕ್ಕೆ ಹೋಗುವುದಿಲ್ಲ. ಈ ಸರ್ಕಾರ ಉಳಿಯುತ್ತದೆಯೋ, ಇಲ್ಲವೋ ಎಂದು ಸುದ್ದಿಯಾಯಿತು. ಆ ವರದಿ ಇವರಿಗೆ ಕೊಟ್ಟೋರು ಯಾರು? ಎಂದು ಅವರು ಪ್ರಶ್ನಿಸಿದರು.

ಪಕ್ಷ ಅಳಿಸಲು ಸಾಧ್ಯವಿಲ್ಲ: ತೆನೆ ಹೊತ್ತ ಮಹಿಳೆ ಬಗ್ಗೆ ಈ ರೀತಿ ಮಾತನಾಡಬಾರದು. ಈ ಪಕ್ಷವನ್ನು ಯಾರೂ ಅಲುಗಾಡಿಸಲು, ಅಳಿಸಲು ಸಾಧ್ಯವಿಲ್ಲ. ಸೋಲು ಗೆಲುವು ಮಾಮೂಲಿ. ನಾನು ಕಾಂಗ್ರೆಸ್ ಬಗ್ಗೆ ಮಾತನಾಡಿದರೆ ತುಂಬಾ ಮಾತನಾಡುತ್ತೇನೆ. ಕಾಂಗ್ರೆಸ್ ಬಗ್ಗೆ ನನಗೆ ಗೊತ್ತಿದೆ ಎಂದರು.

ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿ ಹೋಗಿದ್ರು. ಆಗ ನಾವು ಕಾಂಗ್ರೆಸ್ ಜೊತೆ ನಿಲ್ಲಲಿಲ್ಲವೇ?. ಅದಕ್ಕೆ ಕುಮಾರಸ್ವಾಮಿ ಕಾರಣವಲ್ಲ, ನಾನೇ. ಈ ಸಲ ನನ್ನ ಸೆಕ್ಯೂಲರ್ ಶಿಫ್ ಅನ್ನು ಪರೀಕ್ಷೆ ಮಾಡಲಿ. ತಮಿಳುನಾಡಲ್ಲಿ ಏನಾಯ್ತು?, ಯಾರ ಮನೆ ಬಾಗಿಲಿಗೆ ಹೋಗಿದ್ರು, ಬಿಹಾರದಲ್ಲಿ ಏನಾಯ್ತು?. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಸರ್ಕಾರ ಮಾಡಿಕೊಂಡಿಲ್ವಾ?. ಗೋದ್ರಾ ಹತ್ಯಾಕಾಂಡ ವಿಚಾರ ಏನಾಯ್ತು?. ಮುಸ್ಲಿಮರನ್ನು ಉಳಿಸೋ ಶಕ್ತಿ ಇವರಿಗೆ ಇಲ್ಲ. ಮುಸ್ಲಿಮರನ್ನು ದಾರಿ ತಪ್ಪಿಸಿದ್ದು ಯಾರು? ಎಂದು ಗೌಡರು ತಿರುಗೇಟು ನೀಡಿದರು.

ಓದಿ:ಸಿದ್ದರಾಮಯ್ಯನವರ ವ್ಯಕ್ತಿತ್ವ ತುಂಬಾ ದೊಡ್ಡದಿದೆ, ಅವರ ಬಗ್ಗೆ ಮಾತನಾಡುವುದಿಲ್ಲ: ದೇವೇಗೌಡ

ಸಭಾಪತಿ ರಾಜೀನಾಮೆ ವಿಚಾರದಲ್ಲಿ ನನ್ನ ಸೆಕ್ಯೂಲರ್ ಪ್ರಶ್ನೆ ಮಾಡಿದ್ದಾರೆ. ಇವರು ಮಾಡ್ತಿರೋದು ಹಾಗಾದ್ರೆ ಏನು? ಎಂದು ಪ್ರಶ್ನಿಸಿದ ಅವರು 130 ಇದ್ದದ್ದೂ 78 ಯಾಕೆ ಬಂತು. ಹಾಲು, ಅಕ್ಕಿ ಭಾಗ್ಯದ ಮೇಲೆ ಭಾಗ್ಯ ಕೊಟ್ರಿ ಏನಾಯ್ತು?. ಜೆಡಿಎಸ್ ಜೊತೆ ಹೋಗಿದ್ದಕ್ಕೆ ಅಂತಾ ಹೇಳ್ತೀರಾ?. ನಾವು 28 ಸೀಟ್ ಕಳೆದುಕೊಂಡೆವು, ಅವರು 50 ಸೀಟು ಕಳೆದುಕೊಂಡರು. ಹಾಸನದಲ್ಲಿ ಈಗ ಕಾಂಗ್ರೆಸ್ ಏನಾಗಿದೆ. ಒಂದು ನಗರಸಭೆ ಚುನಾವಣೆ ಗೆಲ್ಲೋಕೆ ಆಗಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್​ ಅಲುಗಾಡಿಸಲು ಸಾಧ್ಯವಿಲ್ಲ: ಜೆಡಿಎಸ್ ಮನೆ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್ ಮನೆ ಅಲುಗಾಡುತ್ತಿದೆ ಅಂತೀರಾ?, ಏನು ಅಲುಗಾಡುತ್ತಿದೆ. ಕೆಲವರು ಲಘುವಾಗಿ ಮಾತನಾಡುತ್ತಾರೆ. ಜೆಡಿಎಸ್ ಪಕ್ಷ ನನ್ನಿಂದಾನೇ ಉಳಿಯಬೇಕಾ?, ಪಕ್ಷದಲ್ಲಿ ಇನ್ನೂ ಇದ್ದಾರೆ. ಕಾಂಗ್ರೆಸ್‌ನಲ್ಲೂ ಮೂವರು ಅಲುಗಾಡುತ್ತಿದ್ದಾರೆ. 2018 ರಲ್ಲಿ ಸರ್ಕಾರ ರಚನೆಗೆ ಗುಲಾಂ ನಬಿ ಆಜಾದ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಎಲ್ಲರೂ ಬಂದಿದ್ದರು. ಮಾತನಾಡುವಾಗ ಕಿಂಚಿತ್ತಾದ್ರೂ ವಾಸ್ತವ ಘಟನೆ ಬಗ್ಗೆ ಮಾತಾಡಬೇಕು. ನಾನು ಮೂಲ ಕಾಂಗ್ರೆಸ್​ನವನೇ. ಕೆಲವು ತಿಕ್ಕಾಟದಿಂದ ನನ್ನನ್ನು ಹೊರಹಾಕಿದ್ರು, ಆ ಸನ್ನಿವೇಶದಲ್ಲಿ ಅದಕ್ಕೆ ನಾನೇ ಕಾರಣ ಎಂದರು.

Last Updated : Dec 26, 2020, 5:16 PM IST

ABOUT THE AUTHOR

...view details