ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ(CD Case) ಕುರಿತು ಎಸ್‌ಐಟಿ ನಡೆಸಿರುವ ತನಿಖೆಯ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕೇ? ಅಥವಾ ಬೇಡವೇ? ಎನ್ನುವ ಕುರಿತು ಸೆ.27ರಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಸಿ. ಶರ್ಮ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಎಸ್‌ಐಟಿ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಿದ್ಧಪಡಿಸಿದೆ. ಅದನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು. ಆದರೆ ಅಂತಿಮ ವರದಿ ಸಲ್ಲಿಕೆಯು ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬುದಾಗಿ ಷರತ್ತು ವಿಧಿಸಬಹುದು ಎಂದು ಕೋರಿದರು.
ಇದನ್ನೂ ಓದಿ:CD CASE: ಯುವತಿ ಪರ ವಕೀಲರಿಗೆ ಅನಾರೋಗ್ಯ; ವಿಚಾರಣೆ ಮುಂದೂಡಿದ ಹೈಕೋರ್ಟ್
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆ ಪರ ವಕೀಲೆ ಇಂದಿರಾ ಜೈಸಿಂಗ್, ಯಾವುದೇ ಕಾರಣಕ್ಕೂ ಅಂತಿಮ ವರದಿ ಸಲ್ಲಿಕೆಗೆ ನ್ಯಾಯಾಲಯ ಅನುಮತಿ ನೀಡಬಾರದು. ಪ್ರಕರಣದ ಆರೋಪಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅರ್ಜಿಯಲ್ಲಿ ಎಸ್‌ಐಟಿ ರಚನೆಯ ಸಿಂಧುತ್ವವನ್ನೇ ಪ್ರಶ್ನಿಸಲಾಗಿದೆ. ಹಿಂದಿನ ಗೃಹ ಸಚಿವರು ಎಸ್‌ಐಟಿ ತನಿಖೆಗೆ ಆದೇಶಿಸಿದ್ದು, ಅಂತಹ ಅಧಿಕಾರ ಅವರಿಗೆ ಇಲ್ಲ ಎಂಬುದು ನಮ್ಮ ವಾದವಾಗಿದೆ. ಜೊತೆಗೆ ಎಸ್‌ಐಟಿ ಮುಖ್ಯಸ್ಥರಿಲ್ಲದೆ ಬೇರೆ ಬೇರೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ವರದಿಯು ಸಿಆರ್‌ಪಿಸಿ ಸೆಕ್ಷನ್ 173ಕ್ಕೆ ಅನುಗುಣವಾಗಿಲ್ಲ. ಇದೇ ಕಾರಣಕ್ಕೆ ಹಿಂದಿನ ಸಿಜೆ ಅಂತಿಮ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಬಂಧ ವಿಧಿಸಿದ್ದಾರೆ. ಪೊಲೀಸ್ ಆಯುಕ್ತರು ರಚಿಸಿದ ಎಸ್‌ಐಟಿ ಬಗ್ಗೆ ವಿಶ್ವಾಸವಿಲ್ಲ, ಅಂತಿಮ ವರದಿ ಸಲ್ಲಿಕೆಗೆ ಅನುಮತಿ ನೀಡಬಾರದು ಎಂದು ವಾದಿಸಿದರು.
ಇದನ್ನೂ ಓದಿ:ಸಿಡಿ ಕೇಸ್: ಅರ್ಜಿದಾರರ ವಾದ ಆಲಿಸಲು ವಿಚಾರಣೆ ಮುಂದೂಡಿದ ಹೈಕೋರ್ಟ್
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿಗಳ ಮೂಲ ವಿಚಾರಣೆಗೆ ಸಾಕಷ್ಟು ಸಮಯಬೇಕಾಗಿದೆ. ಹಾಗಾಗಿ, ಸದ್ಯ ಎಸ್‌ಐಟಿ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸೆ.27ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.